
ಹೊಸ ಮನೆ, ಹೊಸ ಮಂಚ, ಹೊಸ ವಾಸನೆ, ಹೊಸ ಅಮಲು. ಗೆಜ್ಜೆಯ ಸದ್ದು ಮಾಡುತ್ತ ಮೆಲ್ಲಮೆಲ್ಲನೆ ಹೆಜ್ಜೆ ಇಟ್ಟುಬರುವ ಸೀರೆಯುಟ್ಟ ನಾರಿಗೆ ಲಜ್ಜೆಯಾಗದೆ ಇರಲು ಸಾಧ್ಯವೆ? ಖಂಡಿತ ಆಗೇ ಆಗುತ್ತದೆ. ತನ್ನನ್ನು ತಾನು ಒಪ್ಪಿಸಿಕೊಳ್ಳುವ ಮುನ್ನ ಏನೋ ಒಂಥರಾ. ಆದರೆ, ಸಂಕೋಚ ಪಟ್ಟುಕೊಂಡು ಹಾಸಿಗೆಯಲ್ಲಿ ಹರವಿದ ಹೂವಿನ ಪಕಳೆಗಳೊಂದಿಗೆ ಮಾತ್ರ ಸಂಭಾಷಿಸುತ್ತ ಕುಳಿತಿರಲು ಸಾಧ್ಯವೆ?
ಗಂಡಸು ಹಾಗಲ್ಲ. ವಿತ್ ಆರ್ ವಿದೌಟ್ ಮೀಸೆಯ ಗಂಡಸರಲ್ಲಿಯೂ ತಳಮಳ, ತವಕ ತಲ್ಲಣಗಳು ಇರುತ್ತವೆಯಾದರೂ, ಹೆಂಗಸರಂತಲ್ಲ. ಮನಸು ಮತ್ತು ದೇಹಗಳು ಒಂದಾಗುವ ಘಳಿಗೆ ನಾಚಿಕೆ, ಸಂಕೋಚವೆಂಬ ಬಟ್ಟೆಯನ್ನು ಕಳಚಿ, ಸುಖದ ಸೋಪಾನಕ್ಕೆ ತೆರೆದುಕೊಳ್ಳಲು ಇಲ್ಲಿ ಕೆಲ ಸಲಹೆಗಳನ್ನು ನೀಡಲಾಗಿದೆ.
* ಹೆಂಡತಿಯಲ್ಲಿನ ಸಂಕೋಚವನ್ನು ಹೋಗಲಾಡಿಸುವ ಜವಾಬ್ದಾರಿ ಪುರುಷನ ಮೇಲಿರುತ್ತದೆ. ನಲ್ಲೆಯನ್ನು ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಮಾಡಿ, ಸಂಕೋಚ ಹೋಗಲಾಡಿಸುವ ಕೆಲಸಕ್ಕೆ ಮೊದಲು ಕೈಹಾಕಬೇಡು.
* ಸಂಗಾತಿಯೊಂದಿಗೆ ಮನಬಿಚ್ಚಿ ಮಾತನಾಡಿ. ಆರಂಭದಲ್ಲಿ ಕೆಲ ವಿಷಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದು ಕಷ್ಟವೆನಿಸಬಹುದು. ಆದರೆ, ಯಾವುದಕ್ಕೂ ಮೊದಲೆಂಬುದು ಇರಲೇಬೇಕಲ್ಲ? ಆ ಆರಂಭ ಮೊದಲ ರಾತ್ರಿಯಂತೆ ಶುರುವಾಗಲಿ.
* ನಲ್ಲ ಸ್ಪರ್ಶಿಸುವಾಗ, ಉಸಿರು ಉಸಿರು ಬೆರೆಯುವಾಗ ಆತಂಕಗಳನ್ನು ತ್ಯಜಿಸಿಬಿಡಿ. ಯಾಕೆಂದರೆ, ಸ್ಪರ್ಶಿಸುತ್ತಿರುವವನು ಬಾಳ ಸಂಗಾತಿ ಎಂಬುದು ನೆನಪಿರಲಿ. ಕೈಗಳು ಆಲಂಗಿಸಿದಾಗ ಆ ಕೈಗಳೇ ಬಾಳಿನುದ್ದಕ್ಕೂ ಕೈಹಿಡಿದು ನಡೆಸುವವೆಂಬ ಅರಿವು ಮನದಲ್ಲಿ ಮೂಡಲಿ.
* ಯಾವುದಕ್ಕೂ ಗಡಿಬಿಡಿ ಬೇಡ. ಎಲ್ಲವೂ ಹಂತಹಂತವಾಗಿ ಮುಂದುವರಿಯಲಿ. ಯಾವುದು ಬೇಕು ಯಾವುದು ಬೇಡ ಎಂಬ ಸಂಗತಿಯನ್ನು ಅರಿಕೆ ಮಾಡಿಕೊಳ್ಳಿರಿ. ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಳ್ಳುವುದು ಜಾಣತನವಲ್ಲ. ಪ್ರತಿಯೊಂದಕ್ಕೂ ಸಂಗಾತಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿರಿ.
* ಸಂಭೋಗಿಸುವುದು ಅಸಹ್ಯಕರ ಎಂಬ ಸಂಗತಿಯನ್ನು ಮನದಲ್ಲಿಂದ ಮೊದಲು ಕಿತ್ತುಹಾಕಬೇಕು. ಗಂಡನೊಂದಿಗೆ ಕಾಮಕೇಳಿಯಲ್ಲಿ ತೊಡಗುವುದು ಪಾಪವೂ ಅಲ್ಲ. ಆದರೆ, ಸಂಗಾತಿಗೆ ಸಹ್ಯವಾಗುವಂತೆ ಮತ್ತು ಇಷ್ಟವಾಗುವಂತೆ ಮಿಲನ ಮಹೋತ್ಸವದಲ್ಲಿ ತೊಡಗಿಕೊಳ್ಳುವುದು ಅಷ್ಟೇ ಮುಖ್ಯ.
ಪ್ರೇಮ ಸಲ್ಲಾಪವೆಂಬುದು ಗಂಡ ಹೆಂಡತಿಯರಿಬ್ಬರೂ ಮನೆಯ ಶಯ್ಯಾಗೃಹದಲ್ಲಿ ಒಟ್ಟಾಗಿ ನಡೆಸುವ ತೀರ ಅಗತ್ಯದ ಕಲಾಪ. ಇಲ್ಲಿ ಪರಸ್ಪರ ವಿಶ್ವಾಸ, ಸ್ನೇಹ ಗಳಿಕೆ ತುಂಬಾ ಅಗತ್ಯ. ತೀರ ಸಂಕೋಚದಿಂದ ವರ್ತಿಸಿದರೆ ಇನ್ನೊಬ್ಬರ ಮೂಡೂ ಹಾಳಾಗಿ ಕಹಿ ಅನುಭವ ನೀಡುವುದು ಖಚಿತ. ಸಂಕೋಚ ಬಿಟ್ಟು ಮಿಲನ ಮಹೋತ್ಸವ ಆಚರಿಸಿಕೊಂಡರೆ ಮರೆಯಲಾಗದ ಸಂತಸ ಉಚಿತ.