ಸೆಕ್ಸ್ ಅಥವಾ ಸಂಭೋಗ ಸಹಜ ಪ್ರಕ್ರಿಯೆಯಂತೆ ಆಚರಣೆಯಲ್ಲಿದ್ದರೆ ಒಳ್ಳೆಯದು ಅದರ ಬದಲು ಕುಂತರೂ, ನಿಂತರೂ, ನಡೆದಾಡುವಾಗಲೂ ಎಲ್ಲಾ ಸಮಯದಲ್ಲೂ ಸೆಕ್ಸ್ ಅನ್ನುವ ವೈರಸ್ ಅನ್ನು ತಲೆಯಲ್ಲಿ ತುಂಬಿಕೊಂಡರೆ ಕೊಂಚ ಅಸಹಜ ಹಾಗೂ ಮುಜುಗರ ಎನಿಸುತ್ತದೆ.
ಬೆಡ್ ಮೇಲಿದ್ದಾಗ ಬೇಡದ ವಿಷಯಗಳು ಯಾವುದು? ಕಾಮನ ಆಟಕ್ಕೆ ಶಿವನ ಕಣ್ಣು ತೆರೆದಂತೆ ಅಡ್ಡಿ ಪಡಿಸುವ ಕ್ರಿಯೆಗಳು ಯಾವುವು? ಎಂಬುದನ್ನು ಅರಿತರೆ ಮುಂದಿನದ್ದು ಸರಳ, ಸರಾಗ, ಸುಲಭವಾಗಿ ಬಿಡುತ್ತದೆ.
ಕಿಸ್ಸಿಂಗ್, ಉದ್ರೇಕಿಸುವಿಕೆ, ಸ್ಪರ್ಶ ಸುಖ, ಓರಲ್ ಸೆಕ್ಸ್, ಸಂಭೋಗ, ಉಚ್ಚ್ರಾಯ ಸ್ಥಿತಿ ಹಾಗೂ ಮುಕ್ತಾಯದ ಹಂತದವರೆಗೂ ಪರಸ್ಪರ ಕೊಟ್ಟು ತೊಗೋ ವ್ಯಾಪಾರ ನಡೆದರೆ ಮಾತ್ರ ಎಲ್ಲವೂ ಸುಲಲಿತ. ಆದರೆ, ಕಿರಿಕಿರಿ ಉಂಟು ಮಾಡುವ ವಿಷಯಗಳನ್ನು ದೂರ ಒದ್ದು ಬಿಡಿ.
ಫೋನ್: ನೀವು ಎಷ್ಟೇ ದೊಡ್ಡ ಬಿಸಿನೆಸ್ ಮ್ಯಾನ್ ಆಗಲಿ, ಎಷ್ಟೇ ಒತ್ತಡವುಳ್ಳ ಜೀವನಶೈಲಿ ರೂಢಿಸಿಕೊಂಡದ್ದರೂ ಬೆಡ್ ಮೇಲಿದ್ದಾಗ ಮೊಬೈಲ್ ಫೋನ್ ದೂರ ಇಟ್ಟುಬಿಡಿ. ಇನ್ನೇನು ರಸ ಹೀರಿ ತುತ್ತ ತುದಿ ಮುಟ್ಟುವ ವೇಳೆಗೆ ಕೆಟ್ಟ ರಿಂಗ್ ಟೋನ್ ಅಬ್ಬರಿಸಿ ಮೂಡ್ ಕೆಡಿಸುವುದು ಸಾಮಾನ್ಯ ಸಂಗತಿಯಾಗಿದೆ. ಟೆಕ್ಕಿ ದಂಪತಿಗಳಲ್ಲಿ ಈ ಸಮಸ್ಯೆ ಸಾಮಾನ್ಯವಾಗುತ್ತಿದೆ.
ಮಾತು, ಮಾತು,ಮಾತು: ಅರ್ಜುನ ನಂತೆ ನೀವು ರಸಿಕರಲ್ಲದಿರಬಹುದು, ಕಾಳಿದಾಸನಂತೆ ನಿಮ್ಮಾಕೆಯನ್ನು ವರ್ಣಿಸಲು ಬಾರದಿರಬಹುದು. ಆದರೆ, ಅನಗತ್ಯವಾಗಿ ಮಾತು ಮುಂದುವರೆಸಿದರೆ ಮುಂದಿನ ಕ್ರಿಯೆ ಅಲ್ಲಿಗೆ ಸ್ಥಗಿತಗೊಳ್ಳುತ್ತದೆ. ಇದು ಮಹಿಳೆಯರೂ ಅನ್ವಯಿಸುತ್ತದೆ. ಕಚೇರಿ, ಕೊತ್ತಂಬರಿ ಸೊಪ್ಪು ಕಥೆಯನ್ನು ಬೆಡ್ ಮೇಲಿದ್ದಾಗ ತರಬೇಡಿ. ಸರಸದ ಸಮಯದಲ್ಲಿ ಅನಗತ್ಯ ಸಂಭಾಷಣೆ ದಾಂಪತ್ಯಕ್ಕೆ ಮುಳುವಾದೀತು ಜೋಕೆ!
ಲೈಟ್, ಕೆಮೆರಾ, ಆಕ್ಷನ್: ಬಹುತೇಕ ಮಹಿಳೆಯರಿಗೆ ಕೋಣೆ ದೀಪ ಆನ್ ಇದ್ದಾಗ ಕಾಮಕ್ರಿಯೆಯಲ್ಲಿ ತೊಡಗಿಕೊಳ್ಳಲು ಮುಜುಗರ ಎನಿಸುತ್ತದೆ. ಗಾಢವಾದ ಕತ್ತಲೆಯಲ್ಲೇ ಕಾಮದಾಸೆ ಬಿತ್ತಿ, ಮೋಹಕ ಸನ್ನಿವೇಶ ಬೆಳೆಸಿ ಫಲ ಉಣ್ಣಬೇಕು. ಆಕೆ ಬೇಡ ಎಂದರೆ ಒತ್ತಾಯ ಮಾಡಬೇಡಿ. ಅದೇ ರೀತಿ ಆತನಿಗೆ ಬೇಕೆಂದರೆ ಕೆಲ ಕಾಲ ಬೆಳಕಿನಲ್ಲಿ ನಿಮ್ಮ ನಗ್ನ ಸೌಂದರ್ಯ ತೋರಿಸಿ ನಿಮ್ಮ ಸಂಗಾತಿಯ ಕಣ್ಣು ತುಂಬಿಸಿದರೆ ಏನು ಆಗುವುದಿಲ್ಲ.
ನಿರಾಸಕ್ತರಾಗಲೇ ಬೇಡಿ: ಅಖಾಡಕ್ಕೆ ಇಳಿದ ಮೇಲೆ ಸೋಲುವ ಮಾತೇ ಇಲ್ಲ ಎಂಬಂತೆ ಮುನ್ನುಗ್ಗಿ. ಏನೋ ಯೋಚನೆ ಮಾಡುತ್ತಾ ಮುಜುಗರ ಪಡುತ್ತಾ ಅಥವಾ ಆತುರಾತುರವಾಗಿ ಏನೇನೋ ಮಾಡಲು ಹೋಗಿ ಸಂಗಾತಿ ಕಣ್ಣು ಕೆಂಪಗೆ ಮಾಡಬೇಡಿ. ನಿಮಗೆ ಮೂಡ್ ಇಲ್ಲದಿದ್ದರೆ ನೇರವಾಗಿ ಹೇಳಿಬಿಡಿ. ಅದರ ಬದಲು ಬಲವಂತವಾಗಿ ಎಷ್ಟು ಹೊತ್ತು ಒಟ್ಟಿಗೆ ಬಿದ್ದುಕೊಂಡರೂ ಸರಸ ಹುಟ್ಟದು.
ಒಟ್ಟಿನಲ್ಲಿ ಮಾನಸಿಕ ಒತ್ತಡ ನಿವಾರಣೆ, ಪರಸ್ಪರ ಅರಿತುಕೊಳ್ಳುವಿಕೆಗೆ ಸುಖ ಸಾಧನವಾದ ಸೆಕ್ಸ್ ನಡುವೆ ಇಲ್ಲ ಸಲ್ಲದ ವಿಚಾರಗಳನ್ನು ತಂದು ನಿಮ್ಮ ಲೈಂಗಿಕ ಬದುಕನ್ನು ಹಾಳು ಮಾಡಿಕೊಳ್ಳಬೇಡಿ. ಈ ಬಗ್ಗೆ ಆಲೋಚಿಸಿ..ಆಚರಿಸಿ, ಆನಂದಿಸಿ