ಇದು ಇಂದಿನ ಯಾಂತ್ರಿಕ ಜಗದಲ್ಲಿ ಸಹಜ ಕೂಡ. ಬೆಳಿಗ್ಗೆ ವ್ಯಾಯಾಮ ಮಾಡಲು ಸಮಯ, ವ್ಯವಧಾನ ಇರುವುದಿಲ್ಲ. ಹಲವರು ಆಫೀಸಿನ ಚಿಂತೆಗಳನ್ನು ಬಂಡಲ್ ಕಟ್ಟಿಕೊಂಡು ಮನೆಯಲ್ಲಿನ ಹಾಸಿಗೆಗೂ ತಂದಿರುತ್ತಾರೆ. ಅರ್ಧರಾತ್ರಿಯಾದ್ರೂ ಲ್ಯಾಪ್ ಟಾಪ್ ಕದ ಮುಚ್ಚಿರುವುದಿಲ್ಲ. ತನ್ನ ಲ್ಯಾಪ್ ಮೇಲೆ ಮಲಗಿ ಸರಸವಾಡುತ್ತಾನೆಂದು ಕಾದ ಹೆಂಡತಿ ಅಥವಾ ಸಂಗಾತಿ ಮುನಿಸಿನಿಂದಲೇ ನಿದ್ರೆಗೆ ಜಾರಿರುತ್ತಾಳೆ. ಲೈಫು ಇಷ್ಟೇನಾ?
ಲೈಫು ಇಷ್ಟೇ ಅಲ್ಲ. ಲೈಂಗಿಕ ಜೀವನವನ್ನು ಸರಳ, ಸುಂದರವಾಗಿಸಿಕೊಳ್ಳಲು ಅನೇಕ ಮಾರ್ಗಗಳಿವೆ. ನಿಸರ್ಗವೇ ಸಹಜವಾಗಿ ನಮಗೆ ಆ ಶಕ್ತಿಯನ್ನು ಕರುಣಿಸಿರುತ್ತದೆ. ಬಳಸಿಕೊಳ್ಳುವ ಆಸಕ್ತಿ ಮತ್ತು ವ್ಯವಧಾನ ನಮ್ಮಲ್ಲಿರಬೇಕು ಅಷ್ಟೇ. ಬೇಸಿಗೆ ಕದ ಬಡಿಯುತ್ತಿದೆ. ಚುಮುಚುಮು ಬೆಳಗು, ನೀರವ ರಾತ್ರಿ ನಡುಗಿಸುತ್ತಿದ್ದರೂ ಸೂರ್ಯ ನೆತ್ತಿ ಮೇಲೇರಿದಾಗ ಅಂಗಿ ಚ್ವಣ್ಣ ಕಳಚಿ ಬಿಡಬೇಕೆಂಬ ಆಸೆಯಾಗುತ್ತಿರುತ್ತದೆ. ಮನೆಗೆ ಮರಳುವಾಗ ಬೀದಿಬದಿಯಲ್ಲಿ ಮಾರಾಟಕ್ಕೆ ಬಂದಿರುವ ಕಲ್ಲಂಗಡಿ ಹಣ್ಣನ್ನು ಮನೆಗೆ ಒಯ್ಯುವುದನ್ನು ಮರೆಯಬೇಡಿ. ಪಿಂಕ್ ಲೇಡಿ ಕಲ್ಲಂಗಡಿ ರಸವನ್ನು ನೈಸರ್ಗಿಕ ವಯಾಗ್ರ ಎಂದೇ ಕರೆಯುತ್ತಾರೆ, ತಿಳಿದಿರಲಿ.
ಅನೇಕರಿಗೆ ತಿಳಿದಿರದ ಮತ್ತೊಂದು ಸಂಗತಿಯೆಂದರೆ, ಅಜವಾನ ಎಲೆ ಕೂಡ ಹಾಸಿಗೆಯಲ್ಲಿ ನಮ್ಮ ಪೌರುಷವನ್ನು ವೃದ್ಧಿಸುತ್ತದೆ ಎಂಬ ಸಂಗತಿ ಬೆತ್ತಲೆ ಬಯಲಾಗಿದೆ. ಹಗಲೂ ರಾತ್ರಿ ಸಂಶೋಧನೆ ಮಾಡಿ ವಿಜ್ಞಾನಿಗಳು, ಲೈಂಗಿಕ ನಿರಾಸಕ್ತಿಯಿಂದ ಮುದುಡಿಹೋಗುವ ಪುರುಷ ಪುಂಗವರ ಮನವರಳುವಂತೆ ಮಾಡಿದ್ದಾರೆ. ಪ್ರೇಮದ ಕಾರಂಜಿ ಮತ್ತೆ ಉಕ್ಕುವಂತೆ ಮಾಡಿದ್ದಾರೆ.
ಅಜವಾನದ ಎಲೆ ಎಂಡೋಸ್ಟಿರಾನ್ ಎಂಬ ಪದಾರ್ಥವನ್ನು ಹೊಂದಿದ್ದು, ನೈಸರ್ಗಿಕವಾಗಿ ವೀರ್ಯದ ಉತ್ಪತ್ತಿ ವೃದ್ಧಿಸಿ ಮತ್ತೆ ಲೈಂಗಿಕಾಸಕ್ತಿ ಹೆಚ್ಚುವಂತೆ ಮಾಡುತ್ತದೆ. ಇದರಿಂದ ಸಹಜವಾಗಿ ನಿರ್ವೀರ್ಯತೆಯಿಂದ ಬಳಲುವ ಪುರುಷರಲ್ಲಿ ಕಾಮಕೇಳಿಯ ಉತ್ಸಾಹವನ್ನೂ ಹೆಚ್ಚಿಸುತ್ತದೆ. ಅಷ್ಟು ಮಾತ್ರವಲ್ಲ, ಅಜವಾನದ ಎಲೆಯನ್ನು ಅಗಿದು ತಿನ್ನುವದರಿಂದ ಪುರುಷರನ್ನು ದೈಹಿಕವಾಗಿ ಕೂಡ ಆಕರ್ಷಕರನ್ನಾಗಿ ಮಾಡುತ್ತದೆ ಎನ್ನುತ್ತದೆ ಸಂಶೋಧನೆ. ಕ್ಯಾರೆಟ್ ನಂತೆ ಕಚಕಚನೆ ಅಜವಾನ ಎಲೆಯನ್ನು ತಿಂದರೆ ಕತ್ತಲಾವರಿಸಿದ ನಂತರದ ಸಿದ್ಧತೆಯೂ ಚಕಚಕನೆ ಆಗಿರುತ್ತದೆ.
ಅಜವಾನ ಎಲೆ ವೀರ್ಯೋತ್ಪಾದನೆ ಹೆಚ್ಚಿಸುವುದರಿಂದ ಸಂಭೋಗದಲ್ಲಿ ಅಮಿತವಾದ ಆನಂದ ದೊರಕಿಸಿಕೊಡುತ್ತದೆ. ದುಬಾರಿಯಾದ ನೀಲಿ ಮಾತ್ರೆಗಳ ಸಹವಾಸಕ್ಕೆ ಹೋಗಿ ಆರೋಗ್ಯ ಹಾಳು ಮಾಡಿಕೊಳ್ಳುವ ಬದಲು ಕಡಿಮೆ ಖರ್ಚಿನಲ್ಲಿ ಅಜವಾನ ಎಲೆ ತಿಂದು ಆರೋಗ್ಯ ಮಾತ್ರವಲ್ಲ, ಜೀವನದಲ್ಲಿಯೂ ಗಂಡು ಹೆಣ್ಣಿನ ನಡುವಿನ ಸುಮಧುರ ಭಾವನೆ ಪುಟಿದೇಳುವಂತೆ ಮಾಡಿರಿ. ಅಜವಾನದ ಎಲೆ ತಿಂದ ಯಜಮಾನ ಆಗುವನು ಹಾಸಿಗೆಯಲ್ಲಿ ಪೈಲ್ವಾನ.