ಕಾಮತೃಷೆ ತೀರಿಸಿಕೊಳ್ಳಲು ಸಾಧ್ಯವಾಗದ ಗಂಡಸರಿಗೆ ಅಂಗಕಸಿ ಮಾಡುವ ಮೂಲಕ ತಮ್ಮ ಜನನಾಂಗ(ಶಿಶ್ನ)ದ ಗಾತ್ರ ಹೆಚ್ಚಿಸಲು ಸಾಧ್ಯವಾಗಿದೆ. ವಿನೂತನ ಶಸ್ತ್ರಚಿಕಿತ್ಸೆಯಿಂದ 50 ರ ಹರೆಯದವರು ಕೂಡಾ ಹದಿಹರೆಯದವರಂತೆ ಪೌರುಷ ತೋರಿಸಬಹುದು. ಆದರೆ, ಅದು ಅವರ ದೈಹಿಕ ಸಾಮರ್ಥ್ಯ ಮೇಲೆ ಅವಲಂಬಿಸಿರುತ್ತದೆ. ಕಳೆದ ಮೂರು ತಿಂಗಳಿನಲ್ಲಿ ಸುಮಾರು 9 ಮಂದಿ ಯಶಸ್ವಿಯಾಗಿ ಅಂಗಕಸಿ ಮಾಡಿಸಿಕೊಂಡಿದ್ದಾರೆ.
ಆದರೆ, ಹುಟ್ಟಿನಿಂದ ಶಿಶ್ನದ ಗಾತ್ರ ಚಿಕ್ಕದಾಗಿರುವುದು, ಶಿಶ್ನ ತನ್ನ ಕಾರ್ಯ ನಿರ್ವಹಿಸದೆ hypospadias, epispadias ಮುಂತಾದ ರೋಗಗಳಿಗೆ ತುತ್ತಾದವರ ನೆರವಿಗಾಗಿ ಹುಟ್ಟಿಕೊಂಡ ಶಿಶ್ನ ಹಿಗ್ಗಿಸುವಿಕೆ ಚಿಕಿತ್ಸೆ ಇಂದು ಲೈಂಗಿಕ ಕಾಮನೆ, ತೃಪ್ತಿಗಾಗಿ ಜನರು ಚಿಕಿತ್ಸೆಗಾಗಿ ಹಾತೊರೆಯುತ್ತಿದ್ದಾರೆ. ಶಿಶ್ನದ ಉದ್ದ ಹೆಚ್ಚಾಗಿದ್ದಾರೆ ಮಾತ್ರ ಲೈಂಗಿಕ ತೃಪ್ತಿ ಸಾಧ್ಯ ಎಂಬ ನಂಬಿಕೆ ಬಲವಾಗಿ ತರುಣ, ತರುಣಿಯರಲ್ಲಿ ಬೆಳೆದಿದೆ. ಇದನ್ನು ಸಂಪೂರ್ಣವಾಗಿ ವೈದ್ಯ ಲೋಕ ಕೂಡಾ ಅಲ್ಲಗೆಳೆದಿಲ್ಲ. ಕಾರಣ, ನಂಬಿಕೆ ಸಂಪೂರ್ಣ ತಪ್ಪು ಎಂದರೆ ಸರ್ಜರಿಗೆ ಯಾರೂ ಬಾರದೆ ಇರುವ ಪರಿಸ್ಥಿತಿ ಉಂಟಾಗುವ ಸಂಭವವೆ ಹೆಚ್ಚು.
ಖ್ಯಾತ ಬಂಜೆತನ ತಜ್ಞೆ ಡಾ ಕಾಮಿನಿರಾವ್ ಪ್ರಕಾರ, "ಕಳೆದ ಕೆಲವು ವರ್ಷಗಳಿಂದ ಅಂಗಕಸಿ ಬಗ್ಗೆ ಜನರಿಗೆ ಹೆಚ್ಚಿನ ತಿಳುವಳಿಕೆ ಇರಲಿಲ್ಲ. ಒಂದೆರಡು ಕೇಸ್ ಮಾತ್ರ ಕಂಡಿದ್ದೆವು. ಆದರೆ, ಈಗ ಪ್ರತಿ ಮೂರು ತಿಂಗಳಿಗೊಬ್ಬರಂತೆ ತಮ್ಮ ಜನನಾಂಗದ ಗಾತ್ರ ಹಿಗ್ಗಿಸಲು ಅಥವಾ ಕುಗ್ಗಿಸಿಕೊಳ್ಳಲು ಕ್ಲಿನಿಕಿಗೆ ಭೇಟಿ ನೀಡುತ್ತಿದ್ದಾರೆ. ಇದೀಗ ಗಾತ್ರ ಹಿಗ್ಗಿಸಿಕೊಳ್ಳುವುದು ಫ್ಯಾಷನ್ ಆಗಿ ಬಿಟ್ಟಿದೆ." ಎಂದಿದ್ದಾರೆ.
ಲೈಂಗಿಕ ತಜ್ಞೆ ಡಾ ಪದ್ಮಿನಿ ಪ್ರಸಾದ್ ಪ್ರಕಾರ, “ಬಾಳ ಸಂಗಾತಿಯೊಂದಿಗೆ ಹೆಚ್ಚು ಕ್ರಿಯಾತ್ಮಕವಾಗಿ ಸಂಭೋಗದಲ್ಲಿ ಪಾಲ್ಗೊಳ್ಳಲು ಅಂಗಕಸಿಯಿಂದ ಸಾಧ್ಯ ಎಂದು ಹೆಚ್ಚಿನ ಯುವಕರು ನಂಬಿದ್ದಾರೆ. ಇತ್ತೀಚೆಗೆ ಮುಜುಗರವಿಲ್ಲದೆ ತಮ್ಮ ಬೇಡಿಕೆಯ ಬಗ್ಗೆ ವೈದ್ಯರಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಹೀಗೆ ಬರುತ್ತಿರುವವರಲ್ಲಿ ಯುವಕರಲ್ಲದೆ 40 ರಿಂದ 50 ವಯಸ್ಸಿನ ಆಸುಪಾಸಿನವರು ಇದ್ದಾರೆ" ಎಂದು ಹೇಳಿದ್ದಾರೆ.
"ನನ್ನ ಭೇಟಿಯಾದ 20-30ರ ಹರೆಯದ ಯುವಕರು ಸಂಗಾತಿಯೊಂದಿಗೆ ಅತಿಯಾದ ಸುಖ ಪಡೆಯಬೇಕೆಂದು ಹಾತೊರೆಯುತ್ತಿರುವುದು ಅವರ ಮಾತಿನಿಂದ ವ್ಯಕ್ತವಾಗಿದೆ. ಜೊತೆಗೆ ಜನನಾಂಗ ಉದ್ದದೊಂದಿಗೆ ಗಾತ್ರ ಕೂಡಾ ಬದಲಾಗಬೇಕಿದೆ. ಜನನಾಂಗದ ಶಸ್ತ್ರಚಿಕಿತ್ಸೆ ಸಂಬಂಧಿ ಕಸಿಗೆ ಬರೇ 2 ರಿಂದ 3 ತಾಸಿನ ಅವಧಿ ಸಾಕು. ಬೆಳಗ್ಗೆ ಆಸ್ಪತ್ರೆಗೆ ಬಂದು ಸಂಜೆ ವೇಳೆಗೆ ಮನೆಗೆ ತೆರಳಬಹುದು" ಎಂದು ಪ್ಲಾಸ್ಟಿಕ್ ಸರ್ಜರಿ ಮುಖ್ಯಸ್ಥ ಸಾಹೇಬ್ ಗೌಡಶೆಟ್ಟಿ ಹೇಳುತ್ತಾರೆ.
ಪ್ಲಾಸ್ಟಿಕ್ ಸರ್ಜರಿ ಮೂಲಕ ಶಿಶ್ನ ಹಿಗ್ಗಿಸುವುದರಿಂದ ಲಾಭವೇನು?
* ಪ್ಲಾಸ್ಟಿಕ್ ಸರ್ಜರಿ ಮೂಲಕ ಶಿಶ್ನದ ಉದ್ದವನ್ನು ಸುಮಾರು 1.5 ಇಂಚು ( ಸುಮಾರು 2 ಸೆಂ.ಮೀವರೆಗೂ) ಹಿಗ್ಗಿಸಬಹುದು.
* ಶಿಶ್ನದ ಗಾತ್ರದಲ್ಲಿ ಶೇ.30ರಷ್ಟು ಬೆಳವಣಿಗೆ ಕಾಣಬಹುದು. ಆದರೆ, ಶಿಶ್ನ ನಿಮಿರಿದಾಗ ಉಂಟಾಗುವ ಕೋನವನ್ನು ಬದಲಿಸಲು ಸಾಧ್ಯವಿಲ್ಲ. ಹಾಗೂ ಶಿಶ್ನದ ಕಾರ್ಯದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ.
* ಶಸ್ತ್ರಚಿಕಿತ್ಸೆ ನಂತರ ವೈದ್ಯರ ಸಲಹೆಯಂತೆ ಒಂದು ವಾರ ಕಾಲ ಬ್ಯಾಂಡೇಜ್ ಧರಿಸಬೇಕು. ಸುಮಾರು 10 ರಿಂದ 15 ದಿನಗಳ ವರೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲೇಬಾರದು.
ಈ ಶಸ್ತ್ರಚಿಕಿತ್ಸೆ ಪ್ರಯೋಜನೆ ಪಡೆಯಬೇಕಾದರೆ, ಶಸ್ತ್ರಚಿಕಿತ್ಸೆಗೂ ಮೊದಲು ನಿಮ್ಮ ದೇಹ ತೂಕವನ್ನು ಇಳಿಸಿಕೊಳ್ಳಬೇಕು. ಧೂಮಪಾನ, ಮದ್ಯಪಾನಕ್ಕೆ ಬ್ರೇಕ್ ಹಾಕಬೇಕು. ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ ಇದ್ದರೆ ಅವುಗಳ ನಿಯಂತ್ರಣದಲ್ಲಿರಿಸಿಕೊಳ್ಳಬೇಕು. ಇಷ್ಟಾದರೆ, ಶಿಶ್ನ ಹಿಗ್ಗಿಸುವಿಕೆ ಚಿಕಿತ್ಸೆಗೆ ತಯಾರಾದಂತೆ. ಕೆಲವೊಮ್ಮೆ ತಾತ್ಕಾಲಿಕ ಹಿಗ್ಗಿಸುವಿಕೆ ಚಿಕಿತ್ಸೆ ಅನುಸರಿಸಲಾಗುತ್ತದೆ. ಇದರಲ್ಲಿ ಶಸ್ತ್ರಚಿಕಿತ್ಸೆ ಇಲ್ಲದೆ, ಮಾತ್ರೆ ಹಾಗೂ ಕೆಲ ವ್ಯಾಯಾಮಗಳ ಮೂಲಕ ಹಿಗ್ಗಿಸುವಿಕೆ ಕ್ರಿಯೆಗೆ ನಾಂದಿ ಹಾಡಲಾಗುತ್ತದೆ. ಆದರೆ, ಹೆಚ್ಚಿನ ಪ್ರಕರಣಗಳಲ್ಲಿ ಶಾಶ್ವತ ಚಿಕಿತ್ಸೆ ಮೂಲಕ ಜನನಾಂಗದ ಉದ್ದ, ಗಾತ್ರವನ್ನು ಹಿಗ್ಗಿಸಲಾಗುತ್ತದೆ. ಈ ಮೂಲಕ ಪುರುಷಕರ ಕಾಮತೃಪ್ತಿಗೆ ಸಹಾಯಕವಾಗುತ್ತದೆ. ಆದರೂ, ಅಗತ್ಯವಿದ್ದರೆ ಮಾತ್ರ ಈ ಚಿಕಿತ್ಸೆಗೆ ಒಳಪಡುವುದು ಒಳ್ಳೆಯದು ಎಂಬುದು ಲೈಂಗಿಕ ತಜ್ಞರ ಕಿವಿಮಾತು.