ಇದು ಸತ್ಯವೆ? ಮಾನವ ಇದೆಲ್ಲ ವಸ್ತ್ರಗಳನ್ನು ತೊಟ್ಟುಕೊಂಡಿದ್ದಾನೆಂಬುದನ್ನು ಯಾರೂ ಅಲ್ಲಗಳೆಯಲಾರರು. ಇವೆಲ್ಲ ಅವಗುಣಗಳನ್ನು ತ್ಯಜಿಸಿದ ವ್ಯಕ್ತಿ ಸಿಗುವುದೂ ಅಪರೂಪವೆ. ಹೋಗುವಾಗ ಬೆತ್ತಲೆ, ಬರುವಾಗ ಬೆತ್ತಲೆ, ಬಂದು ಹೋಗುವ ನಡುವೆ ಬರೀ ಕತ್ತಲೆ. ಹೋಗುವಾಗ ಮತ್ತು ಬರುವಾಗ ಅಷ್ಟೇ ಅಲ್ಲ ಇಲ್ಲಿಯೇ ಇದ್ದು ಕೆಲಸ ಮಾಡುವಾಗಲೂ ಬೆತ್ತಲಾಗುವಂತಿದ್ದರೆ ಹೇಗೆ?
ಇಂತಹುದೊಂದು ಬೆತ್ತಲಾಗುವ ಅವಕಾಶವನ್ನು ಬ್ರಿಟನ್ನಿನ ಕಂಪನಿ ನೀಡುತ್ತಿದೆ. ನ್ಯೂಡ್ ಹೌಸ್ ಎಂಬ ಸಾಫ್ಟ್ ವೇರ್ ಕಂಪನಿಯೊಂದು ಸಂಪೂರ್ಣ ಬೆತ್ತಲಾದ ವಾತಾವರಣದಲ್ಲಿ ದಿಗಂಬರರಾಗಿಯೇ ವೆಬ್ ಕೋಡ್ ಬರೆಯಲು ಸಿದ್ಧರಿರುವವರಿಗೆ ಆಹ್ವಾನ ನೀಡಿದೆ ಎಂದು ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ.
ಬೆತ್ತಲು ಇಷ್ಟಪಡುವ ಪ್ರಕೃತಿ ಪ್ರಿಯರ ಗುಂಪುಗಳ ಬಗ್ಗೆ ಕೇಳಿದ್ದೇವೆ. ಬೇಕೆಂದಾಗಲೆಲ್ಲ ಮತ್ತು ಬೇಡವೆಂದಾಗಲೆಲ್ಲ ಬೆತ್ತಲಾಗಿ ಹಂಗಾಮಾ ಮಾಡುವವರನ್ನೂ ಕೇಳಿದ್ದೇವೆ, ನೋಡಿದ್ದೇವೆ. ಪಾಶ್ಚಾತ್ಯ ದೇಶಗಳಲ್ಲಿ ಬೆತ್ತಲಾಗುವುದು ಅಂಗಿ ಕಳಚಿದಷ್ಟೇ ಸಹಜ. ಭಾರತದ ಮಾಡೆಲ್ ಪೂನಂ ಪಾಂಡೆ ಭಾರತ ವಿಶ್ವಕಪ್ ಗೆದ್ದಾಗ ಬೆತ್ತಲಾಗುವುದಾಗಿ ಹೇಳಿ ಇಡೀ ದೇಶವನ್ನು ಬೆಚ್ಚಿಬೀಳಿಸಿದ್ದರು. ಯಾರೂ ಅದಕ್ಕೆ ಅವಕಾಶ ನೀಡಲಿಲ್ಲ ಅನ್ನುವುದು ಬೇರೆ ಮಾತು.
ಇನ್ನೊಂದು ವಿಶೇಷವೆಂದರೆ, ಈ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಶವರ್ ಜೊತೆಗೆ ಸಂತೋಷವಾಗಿರಲು ಏನೇನು ಬೇಕೋ ಅದನ್ನೆಲ್ಲ ಪೂರೈಸುವ ಭರವಸೆಗಳನ್ನು ನೀಡಿದ್ದಾರೆ. ಒಟ್ಟಿನಲ್ಲಿ ಕಚೇರಿಗೆ ಕೆಲಸಕ್ಕೆಂದು ಬಂದವರು ಆನಂದದ ಜೊತೆಗೆ ಸಖತ್ತಾಗಿ ಕೋಡಿಂಗನ್ನೂ ಮಾಡಬೇಕು ಎಂಬುದು ಕಂಪನಿ ಸ್ಥಾಪಿಸಿದವರು ಸದಾಶಯ. ಅಲ್ಲಿ ಕುರ್ಚಿಯ ಮೇಲೇ ಕುಳಿತು ಕೆಲಸ ಮಾಡಬೇಕಂತೆನೂ ಇಲ್ಲ. ಹೇಗಾದರೂ ಕೆಲಸ ಮಾಡಬಹುದು, ಆದರೆ ಕೆಲಸವಾಗಬೇಕು ಅಷ್ಟೆ.
ಬೆತ್ತಲಾದ ಮೇಲೆ ಏನು ಕೆಲಸ ಮಾಡುತ್ತಾರೆ ಎಂದು ನೀವು ಕುಹಕವಾಡಬಹುದು. ಆದರೆ, ಇಂತಹುದೊಂದು ಜಾಹೀರಾತನ್ನು ಕಂಪನಿ ನೀಡಿದೆ. ಇಷ್ಟವಿದ್ದವರು, ಇಂತಹುದೊಂದು ವಿಭಿನ್ನವಾದ ಅನುಭವಕ್ಕೆ ತೆರೆದುಕೊಳ್ಳಬೇಕೆಂದು ಬಯಸುವವರು ಅರ್ಜಿ ಗುಜರಾಯಿಸಬಹುದು. ಕೋಡಿಂಗ್ ಗೊತ್ತಿದ್ದರೆ ಪೂನಂ ಪಾಂಡೆ ಕೂಡ ಅರ್ಜಿ ಸಲ್ಲಿಸಬಹುದು, ಏನಂತೀರಾ?