ಪೋಲಿ ಜೋಕುಗಳು ಅಥವಾ ಪೋಲಿ ಮಾತುಗಳು ಅಂದರೆ ಅಶ್ಲೀಲವಾಗಿರಲೇಬೇಕೆಂದಿಲ್ಲ. ನವಿರು ಹಾಸ್ಯದಿಂದ ಕೂಡಿದ ಅಶ್ಲೀಲತೆಯ ಗೆರೆಯನ್ನು ದಾಟದ ಮಾತುಗಳನ್ನು ಎಂಥ ಮಡಿವಂತಿಕೆಯ ಸಂಗಾತಿಯೂ ಇಷ್ಟುಪಡುತ್ತಾರೆ. ಮೊಬೈಲ್ ಮಾತನಾಡುವಾಗ, ಎಸ್ಎಮ್ಎಸ್ ಕಳಿಸುವಾಗ ಅಥವಾ ಲಗುಬಗನೆ ಕೆಲಸ ಭೊಗಸಿ ಮುಗಿಸಿ ಪಲ್ಲಂಗದ ಮೇಲೆ ಪವಡಿಸುವ ಸಮಯದಲ್ಲಿ ಪೋಲಿ ಮಾತುಗಳು ಪ್ರಣಯಕೇಳಿಗೆ ಮಾತ್ರವಲ್ಲ ನಮ್ಮ ಜೀವನದಲ್ಲಿಯೇ ಜೀವಂತಿಕೆ ತರುತ್ತವೆ.
ಮೆಲ್ಲಗೆ ಹಿಂದಿನಿಂದ ಬಂದು ನಲ್ಲೆಯ ಸೊಂಟ ಚಿವುಟಿ, ಗಟ್ಟಿಯಾಗಿ ತಬ್ಬಿ, ಬಲಗೆನ್ನೆಗೊಂದು ಹೂಮುತ್ತು ಕೊಟ್ಟು, ಎಡಗಿವಿಯಲ್ಲಿ ನಿರೀಕ್ಷಿಸಿಯೇ ಇರದಂಥ ತುಂಟ ಮಾತು ಜೀವದ ಗೆಳತಿಯನ್ನು ಶೃಂಗಾರದ ಅಲೆಯ ಮೇಲೆ ತೇಲಾಡುವಂತೆ ಮಾಡುತ್ತದೆ. ಪೋಲಿ ಜೋಕ್ ಇಷ್ಟವಾಗತ್ತಾ? ಅಂತ ಕೇಳಿ. ಥೂ ಹೋಗಪ್ಪಾ ಇಷ್ಟವಾಗಲ್ಲ. ಅಂತ ಹೇಳಿದರೂ... ಮೈಮನಗಳು ಅರಳುವ ಸಮಯದಲ್ಲಿ, ಅದೇನೋ ಹೇಳ್ತಾಯಿದ್ರಿ ಆವಾಗ.. ಅಂತ ರಾಗ ಎಳೆಯದಿದ್ದರೆ ಕಾಮದೇವನ ಮೇಲಾಣೆ. ಎಲಾ ಕಳ್ಳಿ ನಾಟ್ಕ ಆಡ್ತೀಯಾ.. ಅಂತ ಶುರುಹಚ್ಚಿಕೊಳ್ಳಿ.
ಮದುವೆಯಾದ ಹೊಸದರಲ್ಲಂತೂ ದೇಹದ ನಮಗಿಷ್ಟವಾಗುವ ಭಾಗಗಳ ಹೊಗಳಿಕೆ, ಅಂದ ಚೆಂದದ ಬಣ್ಣನೆ ಕಾಮನೆಗಳನ್ನು ಕೆರಳಿಸುತ್ತವೆ. ಹೊಗಳಿಕೆಗಳು ಮನಮುಟ್ಟುವಂತಿರಬೇಕು. ಏನೇ ಒರತೆ ಕೊರತೆಗಳಿದ್ದರೂ ಅವರವರ ದೇಹವನ್ನು ಅವರವರು ಖಂಡಿತ ಇಷ್ಟಪಡುತ್ತಾರೆ. ಹೊಗಳಿಕೆ ಎಂಬುದು ಸುಖ ಸಂಸಾರದ ಸೂತ್ರಗಳಲ್ಲೊಂದು. ಹೊಗಳುವುದನ್ನು ಇಷ್ಟಪಡಿ ಬಿಡಿ. ಆದರೆ, ಇನಿಯನಿಗಾದರೂ ಹೊಗಳಿಕೆಯ ಪದ್ಧತಿಯನ್ನು ರೂಢಿಯಲ್ಲಿಟ್ಟುಕೊಳ್ಳಿ. ಅದರಲ್ಲೂ ಅಲ್ಪ ಅಶ್ಲೀಲತೆ ಇಣುಕುಹಾಕಿದರೆ ಅದರಲ್ಲಿ ತಪ್ಪೇನೂ ಇಲ್ಲ, ಅಲ್ಲವೆ?
ಆದರೆ, ಒಂದು ಮಾತನ್ನಂತೂ ನೆನಪಿನಲ್ಲಿಡಿ. ಪೋಲಿ ಮಾತುಗಳನ್ನು ನಿಮ್ಮ ಸಂಗಾತಿ ಇಷ್ಟಪಡುತ್ತಾರೆ ಇಲ್ಲವೆ ಎಂಬುದನ್ನು ಅರಿತುಕೊಳ್ಳಿ. ತುಂಟ ಮಾತುಗಳಾಡುವಾಗ ಮನದಲ್ಲಿ ವಿಶ್ವಾಸ ತುಂಬಿರಲಿ, ಬೋರು ಹೊಡೆಸದಂತಿರಲಿ. ಮಡಿವಂತಿಕೆಯನ್ನು ಮಡಚಿಟ್ಟು ತುಂಟ ಮಾತುಗಳಲ್ಲಿ ತೊಡಗಿಕೊಳ್ಳಿರಿ. ಮಾತು ಆರಂಭವಾಗಿ ಬಿಸಿಯುಸಿರಿನ ತಾಕಲಾಟಗಳು ಓಘ ಪಡೆದುಕೊಳ್ಳುತ್ತವೆ. ದೇಹಗಳು ಬೆಸೆಯುತ್ತಿದ್ದಂತೆ ಮಾತುಗಳು ಮುಗಿದು ಮೌನಗಳು ಸಂಭಾಷಣೆಯನ್ನು ಆರಂಭಿಸಿಬಿಡುತ್ತವೆ. ಹ್ಯಾಪಿ ಮಿಲನ ಮಹೋತ್ಸವ.