ಲೈಂಗಿಕತೆಯ ವಿಷಯದಲ್ಲಿ ಪಿಎಚ್ ಡಿ ಮಾಡುತ್ತಿರುರುವ ಒಗಿ ಒಗಾಸ್ ಮತ್ತು ಸಾಯಿ ಗದ್ದಂ ಎಂಬಿಬ್ಬರು ನೂರಾ ಎಂಟು ಪುಸ್ತಕಗಳು, ಸಾವಿರಾರು ವೆಬ್ ಸೈಟುಗಳನ್ನು ತಡಕಾಡಿ, ಲಕ್ಷಾಂತರ ವಿಡಿಯೋಗಳನ್ನು ಅಧ್ಯಯನ ಮಾಡಿ, ರೋಮ್ಯಾಂಟಿಕ್ ಕಾದಂಬರಿಗಳನ್ನು ಮನನ ಮಾಡಿ, ಸಾವಿರಾರು ಪುರುಷ ಮತ್ತು ಸ್ತ್ರೀಲಿಂಗಿಗಳನ್ನು ಮಾತನಾಡಿಸಿ ಒಂದು ಆಶ್ಚರ್ಯಕರ ಸಂಗತಿಯನ್ನು ಕಂಡುಕೊಂಡಿದ್ದಾರೆ.
ಅದೇನೆಂದರೆ, ಲೈಂಗಿಕ ಚಟುವಟಿಕೆ ನಡೆಯುವಾಗ ಪುರುಷರು ಮತ್ತು ಸ್ತ್ರೀಯರು ವಿಭಿನ್ನವಾಗಿ ಚಿಂತಿಸುತ್ತಿರುತ್ತಾರೆ. ಮಿಲನ ಮಹೋತ್ಸವ ಆಚರಿಸಿಕೊಳ್ಳುವಾಗ ದೇಹ ಮತ್ತು ಮನಸುಗಳೆರಡು ಭಿನ್ನವಲ್ಲ ಎಂದು ಪುರುಷ ಚಿಂತಿಸಿದರೆ, ಸ್ತ್ರೀ ಎರಡನ್ನೂ ಭಿನ್ನವಾಗಿ ನೋಡುತ್ತಾಳೆ. ಕಾಮೋತ್ತೇಜನಗೊಂಡಾಗ ದೇಹ ಬಯಸುವುದು ಮತ್ತು ಮನಸು ಬಯಸುವುದು ಬೇರೆ ಬೇರೆ ಎನ್ನುತ್ತಾಳೆ.
A Billion Wicked Thoughts ಎಂಬ ಪುಸ್ತಕದಲ್ಲಿ ಪಿಎಚ್ ಡಿ ಮಾಡುತ್ತಿರುವ ಒಗಿ ಮತ್ತು ಗದ್ದಂ ಎಂಬಿಬ್ಬರು ಮಾನವನ ಮನಸಿನ ಸಂಕೀರ್ಣತೆಗಳ ಬಗ್ಗೆ ಬರೆದಿದ್ದಾರೆ. ಕಾಮಕ್ರೀಡೆ ನಡೆಯುವಾಗ ಪುರುಷ ಮತ್ತು ಸ್ತ್ರೀಯರ ಮಿದುಳುಗಳು ಯಾವ ರೀತಿ ವರ್ತಿಸುತ್ತವೆ, ಯಾವ ಬಗೆಯ ಚಿಂತನೆಗೆ ನಮ್ಮನ್ನು ದೂಡುತ್ತವೆ ಎಂಬುದನ್ನು ಅಧ್ಯಯನಾತ್ಮಕವಾಗಿ ಬರೆದಿದ್ದಾರೆ.
ಗಂಡು ಮತ್ತು ಹೆಣ್ಣಿನ ವೈಚಾರಿಕತೆಯಲ್ಲಿ ಮೂಲಭೂತವಾಗಿಯೇ ಅನೇಕ ಭಿನ್ನಾಭಿಪ್ರಾಯಗಳಿವೆ. ಸ್ತ್ರೀಯರಲ್ಲಿ ಲೈಂಗಿಕ ಚಟುವಟಿಕೆಗೆ ಬಂದರೆ ದೇಹ ಹೇಳುವುದು ಒಂದಾದರೆ ಮನಸು ಮಾಡುವುದು ಇನ್ನೊಂದು. ದೇಹಗಳು ಒಂದಾಗಿದ್ದರೂ ಮನಸುಗಳು ಇನ್ನೇನೋ ಯೋಚಿಸುತ್ತಿರುತ್ತವೆ ಎಂಬ ವಿಷಯ ಬಹಿರಂಗಪಡಿಸಿದ್ದಾರೆ. ಹೆಂಗಸರು ಇದನ್ನು ಒಪ್ಪುತ್ತಾರೋ ಬಿಡುತ್ತಾರೋ ಎಂಬುದು ಬೇರೆಯ ಪ್ರಶ್ನೆ.
ಮಾನವ ವಿಕಾಸ ಹೊಂದಿದಾಗಿನಿಂದಲೂ ಹೆಣ್ಣು ತನ್ನ ಸಂಗಾತಿಯನ್ನು ಆಯ್ಕೆ ಮಾಡುವ ಹಂತದಲ್ಲಿ ಗಂಡಿಗಿಂತ ನಾಲ್ಕಾರು ಬಾರಿ ಯೋಚಿಸಿರುತ್ತಾಳೆ. ಆದರೆ, ಪುರುಷ ಹಾಗಲ್ಲ, ಸಂಗಾತಿಯ ಆಯ್ಕೆ, ಸಂತಾನೋತ್ಪತ್ತಿಗೆ ಸಂಬಂಧಿಸಿದಂತೆ ಏಕಾಗ್ರಚಿತ್ತನಾಗಿರುತ್ತಾನೆ ಎಂದು ಪಿಎಚ್ ಡಿ ವಿದ್ಯಾರ್ಥಿಗಳಿಬ್ಬರು ಬರೆದಿದ್ದಾರೆ. ಇದನ್ನು ಒಪ್ಪುವುದು ಬಿಡುವುದು ಅವರವರಿಗೆ ಬಿಟ್ಟ ವಿಚಾರ.