ಆಗತಾನೆ ನಲ್ಲೆ ಫ್ರಶ್ಶಾಗಿ ಸ್ನಾನ ಮಾಡಿ ಬಂದಾಗ ಸೂಸುವ ಮೈಯ ಘಮಲು, ಹೆಗಲಮೇಲೆ ಜಾರಿಬಿಟ್ಟ ಜಲಪಾತದಂಥ ಮುಡಿಯಲ್ಲಿ ಮುಡಿದಂಥ ಕೆಂಪು ರೋಜಾ ಏರಿಸುವ ಅಮಲು, ಆ ತುಂಟ ನೋಟದಿಂದ ಕೊರಳ ಸುತ್ತ ಕೈಯನ್ನು ಹಾಕಿದಾಗ ಕಂಕುಳಲ್ಲಿಂದ ಬರುವ ವಾಸನೆ ಕೂಡ ಕೆಲವರಲ್ಲಿ ಕಾಮನೆ ಕೆರಳಿಸುತ್ತದೆ.
ಬೆಡ್ ರೂಮಿನಲ್ಲಿ ಹಾಸಿಗೆಯ ಮೇಲೆ ಹೊದಿಸಿದ ಹೊಚ್ಚಹೊಸ ಹೊದಿಕೆಯ ವಾಸನೆ, ರೂಮಿನ ತುಂಬ ಸಿಂಪಡಿಸಿದ ಅತ್ತರಿನ ವಾಸನೆ, ನಲ್ಲೆಗಾಗಿ ತಂದ ಮೈಸೂರು ಮಲ್ಲಿಗೆ ಹಾಸಿಗೆಯ ಮೇಲೆ ಹೊರಳಾಡಿದ ವಾಸನೆ, ಸಂಗಾತಿ ತನ್ನ ನವಿರು ಬೆರಳತುದಿಗೆ ಉಗುರಿನ ಮೇಲೆ ಹಚ್ಚಿದ ಲ್ಯಾಕ್ಮೆ ನೇಲ್ ಪಾಲಿಶ್ ವಾಸನೆ...
ವೆರೈಟಿ ವೆರೈಟಿ ವಾಸನೆಗಳು ಕಾಮನಬಿಲ್ಲನ್ನು ಹದೆಯೇರಿಸುವಲ್ಲಿ ಅದ್ಭುತ ಕೆಲಸ ಮಾಡಿರುತ್ತವೆ. ಆದರೆ, ಅಡುಗೆಮನೆಯ ಮೂಲೆಯಲ್ಲಿ ಕುಳಿತಿರುವ ಡುಮ್ಮ ಹೊಟ್ಟೆಯ ಸಿಹಿ ಕುಂಬಳಕಾಯಿಯ ವಾಸನೆಯಿದೆಯಲ್ಲ, ಕಾಮನೆ ಕೆರಳಿಸುವಲ್ಲಿ ಎಲ್ಲ ವಾಸನೆಗಳಿಗಿಂತ ಮುಂದು. ಸುಗಂಧ ದ್ರವ್ಯ ಕೂಡ ಕುಂಬಳಕಾಯಿಯ ಮುಂದೆ ತನ್ನ ವಾಸನೆ ಕಳೆದುಕೊಂಡು ಬಿಡುತ್ತದೆ.
ಕುಂಬಳಕಾಯಿಯಿಂದ ಹೊರಹೊಮ್ಮುವ ವಿಶಿಷ್ಟ ಬಗೆಯ ವಾಸನೆ ಗಂಡಿನಲ್ಲಿ ರಕ್ತದ ಪರಿಚಲನೆಯನ್ನು ದ್ವಿಗುಣಗೊಳಿಸುತ್ತದೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ. ಅದರಲ್ಲೂ ಕುಂಬಳಕಾಯಿಯ ವಾಸನೆಯನ್ನು ಲ್ಯಾವೆಂಡರ್ ವಾಸನೆಯೊಂದಿಗೆ ಮಿಳಿತಗೊಳಿಸಿದಾಗ ಏರುವ ನಶೆ ಕಾಮನೆಯನ್ನು ಬಡಿದೆಬ್ಬಿಸುವಲ್ಲಿ ಎಲ್ಲಕ್ಕಿಂತ ಹೆಚ್ಚು ಪರಿಣಾಮ ಬೀರುತ್ತದೆ.
ಎಂಥದೇ ವಾಸನೆಯಿದ್ದರೂ ಕಾಮನೆ ಕೆರಳುತ್ತಿಲ್ಲ ಎಂದು ಅಲವತ್ತುಕೊಳ್ಳುವ ಗಂಡಸರು, ಹೆಂಡತಿ ಕುಂಬಳಕಾಯಿಯನ್ನು ಕತ್ತರಿಸಿ ಹುಳಿ ಮಾಡುವ ಮುನ್ನ ಅಘ್ರಾಣಿಸಿದರೆ, ಅದರ ಪರಿಣಾಮ ಮರುದಿನ ಮಾಡುವ ಕುಂಬಳಕಾಯಿ ಹುಳಿಯ ಮೇಲೂ ಆಗಿರುತ್ತದೆ. ಸೋ, ಯಾವತ್ತಿದ್ದರೂ ಮನೆಯಲ್ಲಿ ಕುಂಬಳಕಾಯೊಂದಿರಲಿ.