ಹೆಂಡತಿಯ ಮನ ಸುಂಟರಗಾಳಿಗೆ ಹಾರಿದ ಗುಬ್ಬಿಯ ಪುಕ್ಕದಂತೆ ಯಾವ ದಿಕ್ಕಿನಲ್ಲಿ, ಎಷ್ಟು ಎತ್ತರಕ್ಕೆ, ಯಾವ ಸಮಯದಲ್ಲಿ ಹಾರಿಬಿಡುತ್ತದೆ ಎಂದು ಗಂಡ-ಹೆಂಡತಿ ಪಂಡಿತರಿಗೂ ಸಾಧ್ಯವಿಲ್ಲ. ಗುರ್ ಎನ್ನುತ್ತಿರುವ ಹೆಂಡತಿ, ಸಹನೆಗೆ ಸವಾಲ್ ಹಾಕುವ ಸಂಗಾತಿ, ಮಾತು ಪ್ಲಾಟನಂ ಎಂದು ಗುಮ್ ಅಂತೆ ಕುಳಿತ ಮಡದಿಯ ಬಳಿಗೆ ಕೂಡಿಕೆಯ ನಿವೇದನೆ ತೆಗೆದುಕೊಂಡು ಹೋಗುವುದು ಅಷ್ಟು ಸುಲಭದ ಕೆಲಸವಲ್ಲ. ಇವತ್ತು ರಾತ್ರಿ ಬಂದಾದ್ರೂ ಬನ್ನಿ ಎಂದು ಎಚ್ಚರಿಕೆ ನೀಡಿದ ಹೊತ್ತು ಎಲ್ಲಾ ಭಾವನೆಗಳನ್ನು ತಡೆಹಿಡಿದುಕೊಂಡು ಸುಮ್ಮನಿರುವುದು ವಾಸಿ.
ಆದರೆ, ಕಾಮ ಭಾವನೆ ಗರಿಗೆದರಿದಾಗ ಸುಮ್ಮನಿಸುವುದು ಸಾಧ್ಯವೆ? ಹೆಂಡತಿಯನ್ನು ರಮಿಸಲು, ಕೋಪವನ್ನು ಶಮನಗೊಳಿಸಲು, ಪ್ರಣಯಕ್ಕೆ ಸೆಳೆಯಲು ಏನಾದರೂ ಮಾಡಲೇಬೇಕಲ್ಲ? ನಖಶಿಖಾಂತ ಉರಿದುಕೊಂಡು ಬೋರಲು ಮಲಗಿದ ಸಂಗಾತಿಯನ್ನು ಮತ್ತೆ ಪ್ರಣಯಕೇಳಿಗೆ ಸೆಳೆಯುವುದು ಹೇಗೆ? ಇದು ನಿಜಕ್ಕೂ ಗಂಡಸಿಗೆ ಸವಾಲಿನ ಕೆಲಸ. ಆದರೆ, ಸಂಯಮದಿಂದ ನಡೆದುಕೊಂಡರೆ ಯಾವುದೂ ಅಸಾಧ್ಯವಲ್ಲ. ಮುನಿಸಿಕೊಂಡ ಹೆಂಡತಿಯನ್ನು ಒಲಿಸಿಕೊಳ್ಳುವ ತಂತ್ರಗಾರಿಕೆ ಇಲ್ಲಿವೆ.
ಕೋಪ ನೆತ್ತಿಗೇರಿದಾಗ : ನೀವೂ ಕೋಪಿಷ್ಠರಾಗಿದ್ದರೆ, ಅಹಂಕಾರದ ದಾಸರಾಗಿದ್ದರೆ, ಸ್ವಾಭಿಮಾನಕ್ಕೆ ಹೊಡೆತ ಬಿದ್ದೀತೆಂದು ಅಂದುಕೊಳ್ಳುವವರು ನೀವಾಗಿದ್ದರೆ ಸುಮ್ಮನಿರುವುದು ವಾಸಿ. ಹೆಂಡತಿ ಕೋಪ ನೆತ್ತಿಗೇರಿದಾಗ ಅರ್ಧ ಗಂಟೆ ಆಕೆಯನ್ನು ಸುಮ್ಮನಿರಲು ಬಿಟ್ಟುಬಿಡಿ. ನಂತರ, ನಿಮ್ಮಿಂದ ತಪ್ಪಾಗದಿದ್ದರೂ ಸಂಯಮದಿಂದ ಒಂದು ಸಾರಿ ಕೇಳಿ. ಕೋಪ ಶಮನವಾಗುವ ಸೂಚನೆ ದೊರೆತ ಸಮಯ ಗೂಳಿಯಂತೆ ನುಗ್ಗುವ ಬದಲು ಸಂಯಮದಿಂದ ವರ್ತಿಸಿ. ಹಂತಹಂತವಾಗಿ ಒಲಿಸಿಕೊಳ್ಳಲು ಯತ್ನಿಸಿ. ಕೊನೆಗೆ ಕೋಪದ ತಾಪ ಇಳಿದಾಗ ತುಟಿಗೆ ಒಂದು ಹೂಮುತ್ತನಿಟ್ಟುಬಿಡಿ.
ಬೇಜಾರುಪಟ್ಟುಕೊಂಡಾಗ : ನಿಮ್ಮ ಮೇಲೆ ಕೋಪವಿಲ್ಲದೆ, ಬೇರಾವುದೋ ಕಾರಣಕ್ಕೆ ಬೇಜಾರುಪಟ್ಟುಕೊಂಡಾಗ, ಮನಸು ಘಾಸಿಯಾದಾಗ ಒಂದು ಬಿಸಿಯಪ್ಪುಗೆಯ ಜಾದೂಗಿಂತ ಉತ್ತಮವಾದ ಮುಲಾಮು ಇನ್ನೊಂದಿಲ್ಲ. ಆಕೆಯ ಭಾವನೆಯೊಂದಿಗೆ ನಿಮ್ಮ ಭಾವನೆ ಬೆರೆಸಿ, ಮೌನಕ್ಕೆ ಮೌನವಾಗಿರಿ, ಕಣ್ಣೀರಿಗೆ ಕಣ್ಣೀರಾಗಿರಿ. ನೀವು ಆಕೆಯೊಂದಿಗೆ ಯಾವಾಗಲೂ ಇದ್ದೀರಿ ಎಂದು ಮನವರಿಕೆ ಮಾಡಿಕೊಡಿ. ಆಗಲೇ ಎರಡು ದೇಹ ಒಂದು ಜೀವವಾಗುವುದು. ಬಿಗಿಯಾಗಿ ಅಪ್ಪಿಕೊಳ್ಳುತ್ತಲೇ ತಲೆ, ಬೆನ್ನು ನೇವರಿಸಿ. ನಿಧಾನವಾಗಿ ನಿಮ್ಮ ಮೋಹಪಾಶದಲ್ಲಿ ಸೆಳೆದುಕೊಳ್ಳಿರಿ.
ವಿನಾಕಾರಣ ಅನ್ಯಮನಸ್ಕಳಾದಾಗ : ಇಂಥ ಸಂದರ್ಭದಲ್ಲಿ ಹೆಂಡತಿಗೆ ಇಷ್ಟವಾದ ಹಾಡನ್ನು ಗುನುಗುವುದು, ಜೋಕನ್ನು ಕತ್ತರಿಸುವುದು, ಆಕೆಯ ಸೌಂದರ್ಯವನ್ನು ಹೊಗಳುವುದು, ಸರ್ಪ್ರೈಸ್ ಗಿಫ್ಟ್ ಕೊಡುವುದರಿಂದ ಇನಿಯಳನ್ನು ಸನಿಹಕ್ಕೆ ಸೆಳೆಯುವುದು ಸಾಧ್ಯ. ಸೀರೆ ಉಟ್ಟಾಗ ಏನು ಸಖತ್ತಾಗಿ ಕಾಣ್ತೀಯ ಎಂದು ಹೊಗಳಿ ನೋಡಿ, ಮೆಲ್ಲನೆ ಸೊಂಟ ಬಳಸಿ ಮೆತ್ತಗೆ ತಬ್ಬಿಕೊಳ್ಳಿ. ಹಾಗೆಯೆ, ಹೆಂಡತಿಯ ಜೊತೆ ವಿಪರೀತ ರೋಮ್ಯಾಂಟಿಕ್ ಆಗಿದ್ದ ಸಂದರ್ಭವನ್ನು ಹಂಚಿಕೊಳ್ಳಿ. ನೋಡನೋಡುತ್ತಿದ್ದಂತೆ ಅಚ್ಚರಿಯಾಗುವಂತೆ ಬದಲಾವಣೆ ಕಂಡುಬರದಿದ್ದರೆ ಕೇಳಿ.
ವಿಪರೀತ ರೋಮ್ಯಾಂಟಿಕ್ ಆಗಿದ್ದಾಗ : ಸಂಗಾತಿ ವಿಪರೀತ ಮೂಡ್‌ನಲ್ಲಿ ಇದ್ದಾಗ ನೀವು ಉಲ್ಟಾ ಹೊಡೆದರೆ ಇನ್ನು ನಾಲ್ಕು ದಿನ ಆಕೆಯನ್ನು ಸಂಧಿಸಲು ನಿಮಗೆ ಸಾಧ್ಯವಾಗಲಿಕ್ಕಿಲ್ಲ. ಆಕೆ ನಿರಾಶಳಾಗದಂತೆ ನಿಮ್ಮನ್ನು ನೀವು ನಿಭಾಯಿಸಿಕೊಳ್ಳುವುದು ಅತೀ ಮುಖ್ಯ. ನಿಮಗಿಷ್ಟವಿಲ್ಲದಿದ್ದರೆ ಮುಖಕ್ಕೆ ಹೊಡೆದ ಹಾಗೆ ಹೇಳುವ ಬದಲು ನಾಜೂಕಿನಿಂದ ನಿಮ್ಮ ಮನದ ಇಂಗಿತವನ್ನು ಅರಿಕೆ ಮಾಡಬೇಕು. ರಾತ್ರಿಯ ಬದಲು ಬೆಳಗಿನ ಜಾವ ಆದರೆ ಆದೀತಾ ಎಂದು ಕೇಳಿ ಆಕೆಯ ಅನುಮತಿ ಪಡೆದುಕೊಳ್ಳಿ. ಆದರೆ, ನೀಡಿದ ವಾಗ್ದಾನವನ್ನು ಅಜೀಬಾತ್ ಮರೆಯಬೇಡಿ.