ಮ್ಯಾಂಚೆಸ್ಟರ್ ಮತ್ತು ಶೆಫೀಲ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಹಿಡಿದಿರುವುದೇನೆಂದರೆ, ನಮ್ಮ ಜೀವನದಲ್ಲಿ ನಾವು ಅಳವಡಿಸಿಕೊಳ್ಳುವ ಸಣ್ಣಪುಟ್ಟ ಬದಲಾವಣೆಗಳಿಂದ ಪುರುಷರ ಫಲವತ್ತತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಒಬ್ಬ ಪುರುಷ ಎಷ್ಟು ಸಶಕ್ತ ವೀರ್ಯಗಳನ್ನು ಉತ್ಪಾದಿಸಲು ಶಕ್ತನಾಗಿರುತ್ತಾನೆ ಎಂಬುದರ ಮೇಲೆ ಆತನ ವೀರ್ಯತೆ ಅಥವಾ ನಿರ್ವೀರ್ಯತೆ ಅವಲಂಬಿತವಾಗಿರುತ್ತದೆ ಎಂದು ಹ್ಯೂಮನ್ ರಿಪ್ರೊಡಕ್ಷನ್ ಜರ್ನಲ್ ವರದಿ ಮಾಡಿದೆ.
ಈ ಅಂಶವನ್ನು ದೃಢಪಡಿಸಿಕೊಳ್ಳಲು ಸಂಶೋಧಕರು ಸುಮಾರು ಎರಡೂವರೆ ಸಾವಿರ ಪುರುಷರ ಮೇಲೆ ಪ್ರಯೋಗ ನಡೆಸಿದ್ದಾರೆ. ಅವರ ಜೀವನಶೈಲಿಯನ್ನು ಅಧ್ಯಯನ ನಡೆಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ. ಕಡಿಮೆ ವೀರ್ಯ ಸ್ರವಿಸಿದ ಪುರುಷರು ಮತ್ತು ಹೆಚ್ಚು ವೀರ್ಯವನ್ನು ಉತ್ಪಾದಿಸಿದ ಪುರುಷರ ಜೀವನಕ್ರಮವನ್ನು ಅಧ್ಯಯನ ಸಂಶೋಧಕರು ಅಧ್ಯಯನ ಮಾಡಿದ್ದಾರೆ.
ಕಡಿಮೆ ವೀರ್ಯ ಉತ್ಪಾದಿಸಿದ ಪುರುಷರಿಗೆ ಬೇರೆ ವಿಭಿನ್ನ ಕಾರಣಗಳಿಂದ ಹೀಗಾಗಿದೆಯೇ ವಿನಃ ಅತಿಯಾಗಿ ಮದ್ಯ ಸೇವಿಸುವುದರಿಂದ, ಧೂಮಪಾನ ಮಾಡುವುದರಿಂದ ಅಥವಾ ಬಿಗಿಯಾದ ಒಳಚಡ್ಡಿ ಧರಿಸುವುದರಿಂದ ವೀರ್ಯೋತ್ಪಾದನೆ ಕುಂಠಿತವಾಗಿಲ್ಲ ಎಂಬ ಅಂಶ ಬಯಲಿಗೆಳೆದಿದ್ದಾರೆ. ಆದರೆ, ಇದರ ಅರ್ಥ ಅತಿಯಾಗಿ ಸಿಗರೇಟು ಸೇವಿಸುವುದು, ಮದ್ಯ ಹೀರುವುದು, ಅನಗತ್ಯವಾಗಿ ಪೌರುಷ ವರ್ಧನೆಯ ಮಾತ್ರೆ ಸೇವಿಸುವುದು ದೇಹದ ಪ್ರಕೃತಿಗೆ ಒಳ್ಳೆಯದಲ್ಲ ಎಂಬ ಕಿವಿಮಾತನ್ನೂ ವಿಜ್ಞಾನಿಗಳು ನೀಡಿದ್ದಾರೆ.
ಒಬ್ಬೊಬ್ಬರ ಜೀವನಶೈಲಿ ಒಂದೊಂದು ರೀತಿಯದಾಗಿರುತ್ತದೆ. ವೀರ್ಯ ಉತ್ಪಾದಿಸಲು ಏನೇ ಹರಸಾಹಸ ಮಾಡಿದರೂ, ಯಾವುದೇ ರೀತಿ ಜೀವನಶೈಲಿ ಬದಲಿಸಿಕೊಂಡರೂ, ಎಂಥದೇ ಮಾತ್ರೆ ತೆಗೆದುಕೊಂಡರೂ ಪ್ರಯೋಜನವಾಗುವುದಿಲ್ಲ. ಆದ್ದರಿಂದ, ಇಂಥ ಮಾತ್ರೆ ಸೇವಿಸಿದರೆ ಮಕ್ಕಳು ಬೇಗನೆ ಆಗುತ್ತವೆ, ಇಂಥ ಔಷಧಿ ಸೇವಿಸಿದರೆ ಪೌರುಷ ಹೆಚ್ಚಾಗುತ್ತದೆ ಎಂಬ ಜಾಹೀರಾತುಗಳನ್ನು ನಂಬಬಾರದು ಎಂದು ಸಂಶೋಧಕರು ಪುರುಷರಿಗೆ ಹೇಳಿದ್ದಾರೆ. ಆದರೆ, ಜೀವನಶೈಲಿ ಮತ್ತು ಲೈಂಗಿಕ ಜೀವನ ಆರೋಗ್ಯದಿಂದ ಕೂಡಿರಲಿ, ಚಿಂತನೆ ಧನಾತ್ಮಕವಾಗಿರಲಿ, ನಿಮ್ಮಲ್ಲಿ ವಿಶ್ವಾಸವಿರಲಿ ಎಂದು ಅವರು ಕಿವಿಮಾತು ಹೇಳಿದ್ದಾರೆ.