ಇಸ್ಲಾಮಾಬಾದ್, ಜುಲೈ 24: ಉದ್ರೇಕಕಾರಿ ಕಾಂಡೋಮ್ ಜಾಹೀರಾತಿಗೆ ಪಾಕಿಸ್ತಾನ ಸರಕಾರ ಕತ್ತರಿ ಪ್ರಯೋಗ ಮಾಡಿದೆ.
ಖ್ಯಾತ ನಟಿ ಮದಿರಾ ರೂಪದರ್ಶಿಯಾಗಿ ಪಾಲ್ಗೊಂಡಿದ್ದ ಕಾಂಡೋಮ್ ಜಾಹೀರಾತು ಉದ್ರೇಕಕಾರಿಯಾಗಿದ್ದು, ಅನೈತಿಕವಾಗಿದೆ ಎಂದು ಪಾಕಿಸ್ತಾನದ ಮಾಧ್ಯಮ ನಿಯಂತ್ರಣ ಸಂಸ್ಥೆಯು ಸದರಿ ಕಾಂಡೋಮ್ ಜಾಹೀರಾತು ಪ್ರಸಾರಕ್ಕೆ ಕೊಕ್ಕೆ ಹಾಕಿದೆ.
Pakistan Electronic Media Regulatory Authority
ಪವಿತ್ರ ರಂಜಾನ್ ಸಂದರ್ಭದಲ್ಲಿ ಇಂತಹ ಉದ್ರೇಕಕಾರಿ ಜಾಹೀರಾತು ಪ್ರಸಾರವಾಗುವುದು ಔಚಿತ್ಯಪೂರ್ಣವಲ್ಲ ಎಂದು ಭಾವಿಸಿ Pakistan Electronic Media Regulatory Authority 50 ಸೆಕಂಡುಗಳ ಕಾಲದ ನಟಿ ಮದಿರಾ ಚೆಲ್ಲಾಟಕ್ಕೆ ಬ್ರೇಕ್ ಹಾಕಿದೆ.
ಪಾಕಿಸ್ತಾನದ ಟಿವಿ ಮಾಧ್ಯಮಗಳಲ್ಲಿ ಅದರಲ್ಲೂ ರಂಜಾನ್ ಸಂದರ್ಭದಲ್ಲಿ ಇಂತಹ ಉದ್ರೇಕಕಾರಿ ಜಾಹೀರಾತುಗಳು ಪ್ರಸಾರವಾಗುವುದು ಲಂಪಟತನದ್ದಾಗಿದೆ ಎಂದು ಸಂಸ್ಥೆಯ ವಕ್ತಾರ ಫಕರ್ ಮೊಘಲ್ ಹೇಳಿದ್ದಾರೆ.
ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತಾ ಪ್ರಸಾರ ಸ್ಥಗಿತ
ಸಂಸ್ಥೆಯ ಆದೇಶ ಹೊರಬೀಳುತ್ತಿದ್ದಂತೆ ಸಾಮಾಜಿಕ-ಸಾಂಸ್ಕೃತಿಕ ಮತ್ತು ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತಾ ಎಲ್ಲ ಟಿವಿ ಚಾನೆಲುಗಳೂ ಸದರಿ ಕಾಂಡೋಮ್ ಜಾಹೀರಾತು ಪ್ರಸಾರವನ್ನು ಸ್ಥಗಿತಗೊಳಿಸಲು ನಿರ್ಧರಿಸಿವೆ.
ಬೆಡಗಿ ಮದಿರಾ ಸಾಂಗತ್ಯದಲ್ಲಿ:
ಇಷ್ಟಕ್ಕೂ ಜಾಹೀರಾತಿನಲ್ಲಿ ಏನಿದೆಯಪ್ಪಾ ಅಂದರೆ ಮಾದಕ ನಟಿ ಮದಿರಾ ಹಳೆಕಾಲದ ಶೈಲಿಯಲ್ಲಿರುವ ಪಕ್ಕದ ಮನೆಯಲ್ಲಿರುವ ಸಾಮಾನ್ಯ ಯುವಕನೊಬ್ಬನ್ನು ಮದುವೆಯಾಗುತ್ತಾಳೆ. ಸಾಮಾನ್ಯ ಹುಡುಗನೊಬ್ಬ ಟಿವಿ ಬೆಡಗಿಯನ್ನು ಮದುವೆಯಾಗುತ್ತಿರುವುದಕ್ಕೆ ನೆರೆಹೊರೆಯವರು ಆಶ್ಚರ್ಯ ವ್ಯಕ್ತಪಡಿಸುತ್ತಾರೆ.
ಕೆಟ್ಟ ಕುತೂಹಲ ತಡೆಯಲಾರದೆ
ಕೆಟ್ಟ ಕುತೂಹಲ ತಡೆಯಲಾರದೆ ನೆರೆಮನೆಯವನೊಬ್ಬ ಮದಿರಾಳನ್ನು ಮದುವೆಯಾದ ಯುವಕನನ್ನು ತಡೆದು ಕೇಳಿಯೇ ಬಿಡುತ್ತಾನೆ. ಅಂತಹ ಆಧುನಿಕ ಹುಡುಗಿಯನ್ನು ನೀನು ಹೇಗೆ ಸಂತೃಪ್ತಿ ಪಡಿಸುತ್ತೀಯಾ ಎಂದು ಕೇಳುತ್ತಾನೆ.
ಯುವಕನ ಜೇಬಿನಲ್ಲಿ ಜೋಶ್ ಕಾಂಡೋಮ್
ಆಗ ಜಾಹೀರಾತಿನ ಯುವನಾಯಕ ತನ್ನ ಜೇಬಿನಲ್ಲಿರುವ ಜೋಶ್ ಕಾಂಡೋಮ್ ಪ್ಯಾಕೆಟ್ ತೆಗೆದು 'ತನ್ನ ರಹಸ್ಯ'ವನ್ನು ಬಿಚ್ಚಿಡುತ್ತಾ 'ನಿನ್ನ ಜೀವನದಲ್ಲೂ ಜೋಶ್ ತಂದುಕೋ' ಎಂದು ಉಲಿಯುತ್ತಾನೆ.
ಅಮೆರಿಕದ ಸರಕಾರೇತರ ಸಂಸ್ಥೆ ಹೊಣೆ
ಅಂದಹಾಗೆ ಕುಟುಂಬ ಯೋಜನೆ ಮತ್ತು HIV/AIDS ತಡೆಗಟ್ಟುವಲ್ಲಿ ಶ್ರಮಿಸುತ್ತಿರುವ ಅಮೆರಿಕದ ಸರಕಾರೇತರ ಸಂಸ್ಥೆಯೊಂದು ಪಾಕಿಸ್ತಾನದಲ್ಲಿ ಈ ಕಾಂಡೋಮುಗಳ ಮಾರುಕಟ್ಟೆ ಜವಾಬ್ದಾರಿ ಹೊತ್ತಿದೆ.
ಕಾಂಡೋಮ್ ಬಳಕೆಗೆ ಭಾರಿ ಹಿನ್ನಡೆ
ಪಾಕಿಸ್ತಾನದಲ್ಲಿ ಜನಸಂಖ್ಯೆ ಶೇ. 2ರ ಪ್ರಮಾಣದಲ್ಲಿ ವೃದ್ಧಿಸುತ್ತಿದೆ. ಈಗಾಗಲೇ ಪಾಕ್ ಜನಸಂಖ್ಯೆ 180 ದಶಲಕ್ಷದಷ್ಟಿದೆ. ಇಸ್ಲಾಂ ಧರ್ಮಾಚರಣೆಯ ಪಾಕಿಸ್ತಾನದಲ್ಲಿ ಮೌಲ್ವಿಗಳು ಕುಟುಂಬ ಯೋಜನೆಗೆ ಭಾರಿ ವಿರೋಧ ವ್ಯಕ್ತಪಡಿಸುವುದರಿಂದ ಕಾಂಡೋಮ್ ಬಳಕೆಗೆ ಭಾರಿ ಹಿನ್ನಡೆಯಾಗುತ್ತಿದೆ. ಕಾಂಡೋಮ್ ಬಳಕೆಯ ಬಗ್ಗೆ ಬಹಿರಂಗವಾಗಿ ಚಚರ್ಚಿಸುವುದೂ ಪಾಕಿಸ್ತಾನದಲ್ಲಿ ಅಪರಾಧವಾಗಿ ಪರಿಣಮಿಸುತ್ತದೆ. ಆದರೂ ನಗರ ಪ್ರದೇಶಗಳಲ್ಲಿ ಕಾಂಡೋಮ್ ಬಳಕೆ ಬಗ್ಗೆ ಜಾಗೃತಿ ಮೂಡಿದ್ದು, ಉತ್ತೇಜನಕಾರಿಯಾಗಿದೆ. ನಾನಾ ಮಾದರಿಗಳ ಕಾಂಡೋಮುಗಳು ಮಾರಾಟಕ್ಕೆ ಲಭಿಸುತ್ತವೆ ಎಂದು NGO ಅಧಿಕಾರಿಗಳು ಅಲವತ್ತುಕೊಂಡಿದ್ದಾರೆ.