ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗಂಡ ಹೆಂಡತಿ ಇಬ್ಬರು ಬೆಳಗಿನಿಂದ ಸಂಜೆಯವರಗೂ ನಿರಂತರ ದುಡಿದು ರಾತ್ರಿಯಾದ ತಕ್ಷಣ ಹಾಸಿಗೆ ಸಿಕ್ಕರೆ ಸಾಕು, ಅಲ್ಲಿಯೇ ಮಲಗಿ ಬಿಡೋಣ ಎನ್ನುವಷ್ಟು ಸುಸ್ತು. ಇಂಥ ನಾಗಾಲೋಟದ ಜೀವನದಲ್ಲಿ ಪ್ರೀತಿ, ಪ್ರೇಮ, ಕಾಮಕ್ಕೆ ಎಲ್ಲಿದೆ ಸಮಯ ಎಂದು ಕೇಳುವವರು ಸಾಕಷ್ಟು ಜನರಿದ್ದಾರೆ. ಆದರೆ ಫ್ರೆಂಡ್ಸ್ ಒಂದು ಮಾತು ನೆನಪಿನಲ್ಲಿಡಿ. ಜೀವನದಲ್ಲಿ ಕೆಲಸ ಮಾಡುವುದು ಎಷ್ಟು ಅನಿವಾರ್ಯವೂ, ಆರೋಗ್ಯಕ್ಕೂ ಅಷ್ಟೇ ಪ್ರಾಶಸ್ತ್ಯ ನೀಡಬೇಕು. ಮನಸ್ಸು, ದೇಹ ಗಟ್ಟಿಯಾಗಲು ಕೂಡಾ ಲೈಂಗಿಕ ಜೀವನ ಅಗತ್ಯವಾಗಿಬೇಕು. ದಾಂಪತ್ಯವೆಂದರೆ ರಾತ್ರಿ ನಡೆಸುವ ಕೆಲ ನಿಮಿಷಗಳ ಕ್ರಿಯೆ ಮಾತ್ರವಲ್ಲ. ಅಲ್ಲಿ ಮಾತಿದೆ, ಮೌನವಿದೆ, ಸರಸವಿದೆ, ವಿರಸವಿದೆ, ಜಗತ್ತಿದೆ, ನಿರ್ವಾತವೂ ಇದೆ, ಕತ್ತಲಿದೆ, ಬೆಳಕಿದೆ.
ಕತ್ತಲಿಲ್ಲದೆ ಬೆಳಕೂ ಇಲ್ಲ, ಬೆಳಕಿಲ್ಲದೆ ಕತ್ತಲಿಗೆ ಅಸ್ತಿತ್ವವೂ ಇಲ್ಲ. ಎರಡಕ್ಕೂ ಅವಿನಾಭಾವ ಸಂಬಂಧ. ಹಾಗೆಯೇ ಬೆಳಗಿನಿಂತ ಕತ್ತಲಿನವರೆಗೆ, ಕತ್ತಲಿನಿಂದ ಬೆಳಗಿನವರೆಗೆ ದಂಪತಿಗಳು ಸೇರಿಕೊಂಡು ನಡೆಸುವ ಕ್ರಿಯೆ ನಾಳಿನ ಬದುಕಿಗೆ ಷರಾ ಬರೆಯುತ್ತದೆ. ಬೆಳಗ್ಗಿದ್ದಂತೆ ರಾತ್ರಿಯಿರುವುದಿಲ್ಲ, ರಾತ್ರಿ ಹದಗೆಟ್ಟ ಮನಸ್ಸು ಬೆಳಗ್ಗಿಗೆ ಮತ್ತೆ ನಿರಾಳ. ಇವೆರಡರ ಸಂಬಂಧ ಅರಿತುಕೊಂಡು ಬಾಳಿದರೆ ಸ್ವರ್ಗ ಸುಖ, ಇಲ್ಲದಿದ್ದರೆ ಬಾಳೇ ನರಕ.
ಬೆಳಗಿನಿಂದಲೇ ನಮ್ಮ ಜೀವನವನ್ನು ಉಲ್ಲಾಸಮಯವಾಗಿ ಕಳೆಯಬೇಕು ಎಂದುಕೊಂಡಲ್ಲಿ ಹಾಸಿಗೆಯಿಂದ ಏಳುವ ಮೊದಲು ಒಂದೇ ಒಂದು ಮೆತ್ತನೆಯ ಪಪ್ಪಿ ಕೆನ್ನೆಯ ಮೇಲೆ. ಆಮೇಲೆ ಹೆಂಡತಿ ಹೇಗಿರುತ್ತಾಳೆ, ನಿಮ್ಮ ದಿನ ಹೇಗೆ ಇರುತ್ತದೆಂದು ನೀವೇ ನೋಡಿ. ಈ ಒಂದು ಮುತ್ತಿನಲ್ಲಿ ಅಂಥ ಮತ್ತಿದೆ. ಬೆಳಗಿನ ವ್ಯಾಯಾಮ ಮತ್ತು ಚಹಾ ಹಾಗೂ ಪೇಪರ್‌ಗಳನ್ನು ತಿರುವಿ ಹಾಕಿದ ನಂತರ ರಾತ್ರಿ ನಿಮ್ಮಬ್ಬರ ನಡುವೆ ನಡೆದ ಸರಸದ ಬಗ್ಗೆ ಅರ್ಧಾಂಗಿಯ ಕಿವಿಯಲ್ಲಿ ಉಸುರಿ. ಆಕೆಯ ಕಣ್ಣಲ್ಲಿ ಹೊಳಪು ಮೂಡದಿದ್ದರೆ ಕೇಳಿ. ಅದೇ ಮೂಡ್‌ನಲ್ಲಿ ಹಿಂದಿನಿಂದ ಗಟ್ಟಿಯಾಗಿ ಬಳಸಿ ನೀಡಿದ ಸುದೀರ್ಘವಾದ ಚುಂಬನ ಮುಂದಿನ ಕೆಲಸವನ್ನೆಲ್ಲ ಚಕಚಕನೆ ಮಾಡುವಂತೆ ಮಾಡಿ ಕೆಲಸಕ್ಕೆ ಹೋಗಲು ಅಣಿಯಾಗುವ ಹೊತ್ತಿಗೆ ತಿಂಡಿ ತಟ್ಟೆ ನಿಮ್ಮ ಮುಂದಿರುತ್ತದೆ. ಸಂಗಾತಿಗೆ ಸಹಾಯ ಮಾಡಬೇಕು ಎಂಬ ಮನಸ್ಸಿದ್ದಲ್ಲಿ ನಿಮಗೆ ಕಚೇರಿಯ ಸಮಯವನ್ನು ತೂಗಿಸಿಕೊಳ್ಳುವ ಸಾಮರ್ಥ್ಯವಿದ್ದಲ್ಲಿ ಕೆಲ ಹೊತ್ತು ಅಡಿಗೆ ಮನೆಯಲ್ಲಿ ಕಾಲ ಕಳೆಯಿರಿ. ಸಂಗಾತಿಗೆ ಸಹಾಯ ಮಾಡಿದ ಹಾಗೂ ಆಗುತ್ತೆ, ಜತೆಗೆ ಸಂಗಾತಿ ಮನಸ್ಸು ಗೆದ್ದ ಖುಷಿಯೂ ನಿಮ್ಮದಾಗುತ್ತೆ.
ಹೀಗೆ ಅದ್ಭುತವಾಗಿ ಕಳೆದ ಮುಂಜಾವು ದಿನವಿಡೀ ಕಾಡದೆ ಇರದು. ಹೊಸದಾಗಿ ಮದುವೆಯಾಗಿದ್ದರಂತೂ ಹೆಂಡತಿಯೊಡನೆ ಬೆಳಗಿನ ಜಾವ ಕಳೆದ ಸುಮಧುರ ಗಳಿಗೆ ಕಣ್ಣೆದುರಿಗೆ ಬಂದು ಆಫೀಸಿನಲ್ಲಿ ಏನೋ ಮಾಡಲು ಹೋಗಿ ಇನ್ನೇನೋ ಮಾಡೀರಿ ಜೋಕೆ. ಇಂತಹ ಸಮಯದಲ್ಲಿ ಮನಸ್ಸನ್ನು ನಿಗ್ರಹದಲ್ಲಿಡುವುದು ಅತಿ ಅವಶ್ಯ. ಕಚೇರಿಯಲ್ಲಿದ್ದಾಗ ಕಚೇರಿ ಕೆಲಸ, ಮನೆಯಲ್ಲಿದ್ದಾಗ ಮನೆಗೆಲಸ. ಏನಂತೀರಾ? ಮನೆ ಸೇರಿದ ತಕ್ಷಣ ಕಚೇರಿ ಜಂಜಾಟಗಳನ್ನು ಬಟ್ಟೆಯಂತೆ ಬಿಸಾಡಿ ಮೈಮನಗಳನ್ನು ಮತ್ತೆ ಹದ ಮಾಡಿಕೊಳ್ಳಿ.
ಮನೆಯೊಳಗೆ ಕಾಲಿಡುತ್ತಿದ್ದಂತೆ ಹೆಂಡತಿ ಮತ್ತೊಂದು ಸರಸದಾಟಕ್ಕೆ ರೆಡಿಯಾಗಿರುತ್ತಾಳೆಂದು ಖಂಡಿತ ಭಾವಿಸಬೇಡಿ. ದಿನವಿಡೀ ಕೆಲಸ ಮಾಡಿ ದಣಿದ ಮನ ಹಿತಕರವಾದ ಸ್ಪಂದನೆಗೆ ಕಾದಿರುತ್ತದೆ. ಇದಕ್ಕೇ ಅನ್ನುವುದು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿರಬೇಕೆಂದು. ಒಬ್ಬೊಬ್ಬರದೂ ಒಂದೊಂದು ಟೇಸ್ಟ್ ಇರುತ್ತದೆ. ಮನೆಗೆ ತೆರಳುವ ಮುನ್ನ ದುಬಾರಿಯಾಗಿದ್ದರೂ ಕೈಯಲ್ಲೊಂದು ಮೊಳ ಮಲ್ಲಿಗೆ ಹೂವು ಕೊಂಡೊಯ್ಯುವುದು ಮರೆಯಬೇಡಿ. ಚಾಕಲೇಟ್ ಪ್ರೇಮಿಯಾಗಿದ್ದರೆ ಎ ಗಿಫ್ಟ್ ಫಾರ್ ಸಂ ಒನ್ ಯೂ ಲವ್! ಮೊಬೈಲ್ ಪ್ರೇಮಿ ನಿಮ್ಮ ಮಡದಿಯಾಗಿದ್ದರೆ, 'ಇನ್ನೆರಡು ನಿಮಿಷದಲ್ಲಿ ಮನೆಯಲ್ಲಿರುತ್ತೇನೆ. ಲವ್ ಯೂ ಡಾರ್ಲಿಂಗ್' ಸಂದೇಶ ಆಕೆಯನ್ನು ಆಕಾಶದಲ್ಲಿ ತೇಲಾಡುವಂತೆ ಮಾಡಿರುತ್ತದೆ.
ಈ ಸಣ್ಣಪುಟ್ಟ ಕಾಣಿಕೆಗಳೇ ಪಲ್ಲಂಗಕ್ಕೆ ಹೂವಿನ ಹಾಸಿಗೆ ಹಾಸಿ ಇಡುವುದರಲ್ಲಿ ಸಂದೇಹವಿಲ್ಲ. ಅದೂ ಇದೂ ಮಾತನಾಡುತ್ತ ರಾತ್ರಿ ಊಟ ಮುಗಿಸುವ ಹೊತ್ತಿಗೆ ಅದೇ ಮಲ್ಲಿಗೆಯ ವಾಸನೆ ಇರುಳ ಹೊರಳಾಟದ ಅವಿಸ್ಮರಣೀಯ ಗಳಿಗೆಗಳಿಗೆ ನಿಮ್ಮನ್ನು ಅಣಿಗೊಳಿಸಿರುತ್ತದೆ. ನೆನಪಿರಲಿ, ಇಬ್ಬರೂ ಕೆಲಸದಲ್ಲಿದ್ದರೂ ಒಟ್ಟಿಗೇ ಊಟ ಮಾಡಿ. ನೀವು ತಿನ್ನಿಸುವ ಒಂದೇ ತುತ್ತಿನಲ್ಲಿ ಅಕ್ಕರೆಯ, ಪ್ರೀತಿಯ ಸೆಲೆಯಿರುತ್ತದೆ. ದಿನಪೂರ್ತಿ ದುಡಿದ ಮನಕ್ಕೆ ಸುಖಕರ ಸಾಂತ್ವನ ನೀಡುತ್ತದೆ. ರಾತ್ರಿ ಊಟವಾದ ನಂತರ ಅಡುಗೆ ಪಾತ್ರೆಗಳನ್ನು ಎತ್ತಿಡುವಲ್ಲಿ, ತಟ್ಟೆ ಲೋಟಗಳನ್ನು ತೊಳೆಯುವಲ್ಲಿ ಹೆಂಡತಿಯ ಸೆರಗಿನ ಹಿಂದೆಯೇ ಅಡ್ಡಾಡಿ ಸಹಕರಿಸಿದರೆ ಮುಂದಿನ ಕೆಲಸ ಇನ್ನೂ ಸಲೀಸು. ಮನಸು 'ನನ್ನೆದೆ ಢವಢವ ಎನ್ನುತಿದೆ, ಚಿನ್ನಾ ಚಿನ್ನಾ ಬೇಕೆಂದು ಕೂಗುತಿದೆ' ಎಂದು ಹಾಡಲು ಪ್ರಾರಂಭಿಸುತ್ತದೆ.
ಬೇಸಿಗೆಯೇ ಇರಲಿ, ಚಳಿಗಾಲವೇ ಇರಲಿ ರಾತ್ರಿ ಮಲಗುವ ಮೊದಲು ಗೀಜರ್ ಸ್ವಿಚ್ ಆನ್ ಮಾಡಿ ದೇಹ ಹಗುರಾಗುವಂತೆ ಇಬ್ಬರೂ ಒಟ್ಟಿಗೇ ಸ್ನಾನ ಮಾಡಿ. ಈಗ ಬೆಳಗಿನಂತೆ ಗಡಿಬಿಡಿಯಿರುವುದಿಲ್ಲ, ಕೆಲಸಕ್ಕೆ ರೆಡಿಯಾಗಬೇಕಾದ ತವಕವಿರುವುದಿಲ್ಲ. ಬಿಸಿಬಿಸಿ ಸ್ನಾನ ದೇಹ ಮಾತ್ರವಲ್ಲ ಮನಸ್ಸನ್ನೂ ರಾತ್ರಿ ರಸಾನುಭವಕ್ಕೆ ಅಣಿಗೊಳಿಸುತ್ತದೆ. ನಂತರ ಧರಿಸುವ ಬಟ್ಟೆ ಬಗ್ಗೆಯೂ ವಿಶೇಷ ಕಾಳಜಿ ನೀಡಿ. ಹೆಂಡತಿಯನ್ನು ನೋಡಿದರೆ ಮುತ್ತು ನೀಡುವಂತಿರಬೇಕು! ಸವಿರಸಗಾನ ತಾನೇ ಮೇಳೈಸಿದಂತಿರುಬೇಕು!
ಬೆಡ್ ಮೇಲಿನ ಲ್ಯಾಪ್‌ಟಾಪು, ಕೈಯಲ್ಲಿನ ಮೊಬೈಲು, ಮನಸಿನಲ್ಲಿದ್ದ ಕಚೇರಿಯ ಕಡತ, ಅನಗತ್ಯ ಮಾತುಗಳು, ಕಿಟಕಿಯ ಬಾಗಿಲುಗಳು, ಇಗೋ ಎಲ್ಲ ಮುಚ್ಚಿಡಿ. ಇದೆಲ್ಲಕ್ಕಿಂತ ಮೊದಲು ಮೂರ್ಖರ ಪೆಟ್ಟಿಗೆಯನ್ನು ಆಫ್ ಮಾಡಿಬಿಡಿ. ಹೆಂಡತಿಯುಟ್ಟ ಮನಹುಚ್ಚೆಬ್ಬಿಸುವ ದಿರಿಸಿನ ಬಣ್ಣನೆ, ಆಕೆ ಮಾಡಿದ ಅದ್ಭುತ ಅಡುಗೆಯ ಶ್ಲಾಘನೆ (ಅದು ಕೆಟ್ಟದಾಗಿದ್ದರೂ) ಇಬ್ಬರ ಸುಖವನ್ನು ದ್ವಿಗುಣಿಸಬಲ್ಲದು. ನಂತರ ಬಲಗಿವಿ, ಬಲಭುಜ, ಬಲಗೆನ್ನೆ, ಬಲಗಣ್ಣು, ಕೆಳತುಟಿಯ ಮೇಲೊಂದು ಮಧುರವಾದ ತುಟಿಯೊತ್ತು ಮನಸ್ಸನ್ನು ಕೆರಳಿಸಿಬಿಡುತ್ತದೆ. ಅಷ್ಟೂ ಇಷ್ಟೂ ಇದ್ದ ಮಾತುಗಳಿಗೆ ಫುಲ್‌ಸ್ಟಾಪ್ ಹಾಕಿ. ಮೌನವೇ ಮಾತಾಗಬೇಕು, ನಿಶ್ಶಬ್ದವೇ ಗಾನವಾಗಬೇಕು. ಉಸಿರುಸಿರು ಬೆರೆತಾಗ, ಮನಮನ ಒಂದಾದಾಗ, ಕಂಗಳೆರಡು ಕೂಡಿದಾಗ ದೇಹಗಳು ತಾನಾಗೇ ಒಂದಾಗುತ್ತವೆ. ಅದ್ಭುತ ಸರಸಮಯ ಸಮಯಕ್ಕೆ ಮುನ್ನುಡಿ ಹಾಡುತ್ತವೆ.
ಇದೆಲ್ಲಾ ಮಾಡುವಾಗ ಒಂದು ಮಾತನ್ನಂತೂ ನೆನಪಿನಲ್ಲಿಡಿ. ಅದೇನೆಂದರೆ, ಇಡೀ ಜಗತ್ತನ್ನು ಮರೆತುಬಿಡಿ.