ಮದುವೆಯಾದಾಗ ಎಷ್ಟು ಚೆನ್ನಾಗಿತ್ತು, ನಮಗಿಬ್ಬರು ಇಲ್ಲದಾಗ ನಾವಿಬ್ಬರೇ ಇದ್ದಂತಹ ಈ ಲೋಕ ಎಷ್ಟು ಅಂದವಾಗಿತ್ತು, ದೇಹವೆರಡು ಮನಸೊಂದಾಗಿತ್ತು ಎಂದು ಹಳೆಯ ಸವಿನೆನಪುಗಳನ್ನು ನೆನೆದುಕೊಳ್ಳುತ್ತಲೇ... ನೀವು ಈಗ ಮೊದಲಿನಂತಿಲ್ಲ, ರಾತ್ರಿಯಾದೊಡನೆ ಮುಸುಕುಹೊದ್ದು ಮಲಗಿಬಿಡುತ್ತೀರ ಎಂದು ಹೆಂಡತಿ ಬಡಬಡಿಸುತ್ತಿದ್ದರೆ, ನೀನಾದರೂ ಅಷ್ಟೇ ಮೊದಲಿನಂತೆ ಪ್ರತಿಸ್ಪಂದಿಸುತ್ತಲೇ ಇಲ್ಲ, ಸುಸ್ತಾಗಿ ಸಂಜೆ ಮನೆಗೆ ಬಂದವಗೆ ಒಂದು ಹೂಮುತ್ತು ಗತಿಯೂ ಇಲ್ಲದಂತಾಗಿದೆ ಎಂದು ಗಂಡ ವರಾತ ಪ್ರಾರಂಭಿಸಿರುತ್ತಾನೆ.
ಇದು ಒಂದೆರಡು ಜೋಡಿಗಳು ಅನುದಿನದ ಕಥೆಯಲ್ಲ. ಧಾವಂತದ ಬದುಕಿನಲ್ಲಿ ಸಂಸಾರವೆಂಬ ಚಕ್ಕಡಿಯನ್ನು ಎಳೆಯುತಿಹ ಬಹುತೇಕ ಜೋಡಿಗಳ ಶೃಂಗಾರಹೀನ ಕಥೆಯೇ. ಇದಕ್ಕೆ ಕಾರಣಗಳನ್ನು ಕಂಡುಕೊಂಡು, ಬದುಕನ್ನು ಮತ್ತೆ ಕವಲುದಾರಿಗೆ ಎಳೆದೊಯ್ಯದೆ ಅನುಬಂಧ ಬೆಸೆಯುವ ಪ್ರಯತ್ನವನ್ನು ಕಂಡುಕೊಳ್ಳಲು ಅನೇಕರು ಹಿಂಜರಿಯುತ್ತಾರೆ. ಅಸಲಿಗೆ, ಅನೇಕರಿಗೆ ವ್ಯವಧಾನವೂ ಇರುವುದಿಲ್ಲ ಮತ್ತು ಬೇಕಾಗಿರುವುದೂ ಇಲ್ಲ.
ಕಾರಣಗಳೇನು? : ಮೊದಮೊದಲಿಗೆ ಪ್ರತಿದಿನ ರಾತ್ರಿಹಗಲೆನ್ನದೆ ಕೂಡುತ್ತಿದ್ದವರು ಕಂಕುಳಲ್ಲಿ ಮಕ್ಕಳು ಬರುತ್ತಿದ್ದಂತೆ ವಾರಕ್ಕೊಂದು ಬಾರಿ, ತಿಂಗಳಿಗೆರಡು ಬಾರಿ ಅಂತ ಬಲವಂತದ ಮಾಘಸ್ನಾನ ಮಾಡಲು ಶುರುಹಚ್ಚಿಕೊಳ್ಳುತ್ತಾರೆ. ಮಕ್ಕಳಾದ ಮೇಲೆ ಲಕ್ಷ್ಯ ಮಕ್ಕಳೆಡೆಗೆ ಹೋಗುವುದೇನೋ ಸರಿ, ಆದರೆ ಸರಸಮಯ ಗಳಿಗೆಗಳನ್ನು ಕಳೆಯಲು ಬಿಂಕವೇಕೆ?
ಸರಸಮಯ ಜೀವನ ಹಾಳಾಗಿ ಹೋಗಲಿ ಮೊದಲಿಗೆ ದುಡ್ಡು ಮಾಡಿ, ಮನೆ ಕಟ್ಟಿ, ಕಾರು ತಗೊಂಡು ಸೆಟ್ಲ್ ಆಗಬೇಕು ಎಂಬ ವಿಚಾರದೊಂದಿಗೆ ವೈಯಕ್ತಿಕ ಬದುಕನ್ನು ಬಲಿಗೊಟ್ಟು ಹೆಚ್ಚಿನ ಸಮಯವನ್ನು ದಂಪತಿಗಳಿಬ್ಬರೂ ಕಚೇರಿಯಲ್ಲಿ ಕಳೆಯುವವರು ಎರಡು ಮನೆಗೊಂದರಂತೆ ಸಿಗುತ್ತಾರೆ. ಕೆಲಸ ಕಳೆದುಕೊಳ್ಳುವ ಆತಂಕ, ಕಡಿಮೆ ಸಂಬಳ, ಹಣದುಬ್ಬರ ಮುಂತಾದವು ಸಾಕಪ್ಪಾ ಸಾಕು ಅನ್ನುವಂತೆ ಮಾಡಿ ಕೇಳಿಗೆ ಕೂಡ ಅಪಾಯಿಂಟ್ ಮೆಂಟು ತೆಗೆದುಕೊಳ್ಳುವಂತೆ ಮಾಡಿಬಿಡುತ್ತದೆ.
ಹಳಸುತ್ತಿರುವ ಸಂಬಂಧ ಅಥವಾ ಅನೈತಿಕ ಸಂಬಂಧ ಅಥವಾ ವಿವಾಹೇತರ ಸಂಬಂಧಗಳೂ ಲೈಂಗಿಕ ಆಸಕ್ತಿಗೆ ಅಡ್ಡಗಾಲು ಹಾಕುತ್ತವೆ. ಈ ಸಂಗತಿಗಳು ಮಾನಸಿಕವಾಗಿ ಸಾಕಷ್ಟು ಕುಗ್ಗಿಸುತ್ತವೆಯಾದರೂ ಲೈಂಗಿಕ ಜೀವನಕ್ಕೆ ಕೆಲ ಸಮಯ ಕಡ್ಡಾಯವಾಗಿ ಮುಡಿಪಿಟ್ಟರೆ ಬದುಕು ಬೇರೆಯದೇ ಆದ ತಿರುವನ್ನು ಪಡೆದಿರುತ್ತದೆ.
ಪರಿಹಾರವೇನು? : ಎಲ್ಲ ಸಮಸ್ಯೆಗಳಿಗೂ ಪರಿಹಾರವಿರುವಂತೆ ಈ ಸಮಸ್ಯೆಗಳಿಗೂ ಪರಿಹಾರವಿದ್ದೇ ಇದೆ. ಲೈಂಗಿಕ ತಜ್ಞರು ಹೇಳುವಂತೆ, ಲೈಂಗಿಕಾಸಕ್ತಿ ಕುಂದಿರುವ ಬಗ್ಗೆ ನಿಮ್ಮ ಸಂಗಾತಿಗೆ ಪ್ರಶ್ನೆ ಕೇಳುವ ಮೊದಲು ನಿಮಗೇ ಈ ಪ್ರಶ್ನೆಯನ್ನು ಹಾಕಿಕೊಂಡು ಪರಿಹಾರವನ್ನು ಕಂಡುಕೊಳ್ಳಿ. ನಂತರ, ದಂಪತಿಗಳಿಬ್ಬರೂ ಕುಳಿತು ಜಗಳವಾಡದೆ, ಶಾಂತವಾಗಿ ಪರಸ್ಪರ ಕಾರಣಗಳನ್ನು ಹುಡುಕಿಕೊಳ್ಳಿ. ಈ ಚರ್ಚೆಯಿಂದ ನಿಮಗೆ ಸಿಗುವ ಮಾನಸಿಕ ಸ್ಥಿಮಿತವೇ ಲೈಂಗಿಕ ನಿರಾಸಕ್ತಿಗೆ ಪರಿಹಾರವನ್ನು ಹುಡುಕಿಕೊಟ್ಟಿರುತ್ತದೆ.
ಮುಂದಿನ ಹಂತ, ಸಂಗಾತಿಯಲ್ಲಿ ಲೈಂಗಿಕಾಸಕ್ತಿ ಕೆರಳಬೇಕಿದ್ದರೆ ಏನು ಮಾಡಿದರೆ ಉತ್ತಮವೆಂದು ತಿಳಿದುಕೊಳ್ಳಿ. ಆಸಕ್ತಿಗಳು, ನಾನು ಅನುಭವಿಸುವ ರೀತಿಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ. ಯಾವುದೇ ಕಾರಣಕ್ಕೂ ಸಿಟ್ಟಾಗಬೇಡಿ, ಒತ್ತಡ ತಂದುಕೊಳ್ಳಬೇಡಿ. ಮನಸು ಮನಸುಗಳ ಮಿಲನೇ ದೇಹಗಳ ಮಿಲನಕ್ಕೂ ಹೂವಿನ ಹಾಸಿಗೆ ಹಾಸಿರುತ್ತದೆ ಎಂಬುದನ್ನು ಎಲ್ಲರೂ ಮನಗಾಣಬೇಕು.
ಎಲ್ಲಕ್ಕಿಂತ ಮುಖ್ಯವಾಗಿ, ಕಾಮಕ್ರೀಡೆಗೂ ಸಮಯ ನಿಗದಿಪಡಿಸಿಕೊಳ್ಳಲೇಬೇಡಿ. ಸಮಯ ಸಿಕ್ಕಾಗಲೆಲ್ಲ ನೀವುಂಟು ಈ ಲೋಕದಲ್ಲಿ ನೀವಿಬ್ಬರೇ ಉಂಟು ಎಂಬಂತೆ ಮನೆಯಲ್ಲಿ ಮಿಲನ ಮಹೋತ್ಸವ ಸಂಭವಿಸಲಿ. ಲೈಂಗಿಕ ಕ್ರೀಡೆ ಬೆಡ್ ರೂಮಲ್ಲೇ ಆಗಬೇಕೆಂದೇನೂ ಇಲ್ಲ. ಈಗ ತಾನೆ ಮದುವೆಯಾಗಿದ್ದೇವೆ, ಈ ಸಮಯವೇ ಮೊದಲರಾತ್ರಿ ಎಂಬಂತೆ ಆಚರಿಸಿಕೊಳ್ಳಿ. ಅಗತ್ಯ ಬಿದ್ದರೆ ತಜ್ಞರ ಸಲಹೆಯನ್ನೂ ಪಡೆದುಕೊಳ್ಳಿ. ನಿಮ್ಮ ಜೀವನ ಸರಸಮಯವಾಗಿರಲಿ.