ಸಾಮಾನ್ಯವಾಗಿ ಈ ವಿಷ್ಯಗಳಲ್ಲಿ ಹೆಣ್ಣನ್ನು ದೂಷಿಸಿ ಭಂಜೆ ಎಂದು ನಿಂದಿಸುವುದುಂಟು. ನಿಷ್ಫಲ ಶೂರ ಪುರುಷರಿಗೆ ಈ ರೀತಿ ಸಮಸ್ಯೆಗಳನ್ನು ಹೇಳಿಕೊಳ್ಳಲು ಮುಜುಗರ, ಪ್ರತಿಷ್ಠೆ ಅಡ್ಡಬರುತ್ತದೆ. ಆದರೆ, ಇದು ದಾಂಪತ್ಯಕ್ಕೆ ಕೊಡಲಿ ಪೆಟ್ಟಾಗಬಹುದು. ವೀರ್ಯ ಕೊರತೆ ಕಾರಣದಿಂದ ಪುರುಷರಲ್ಲಿ ಕಾಡುವ ಸಮಸ್ಯೆ ಬಗೆಹರಿಸಿಕೊಳ್ಳುವುದು ಸೂಕ್ತ. ಪ್ರತಿ ಒಂದು ಮಿಲಿ ಮೀಟರ್ ಗೆ 20 ಮಿಲಿಯನ್ ಗಿಂತ ಕಡಿಮೆ ವೀರ್ಯಾಣುಗಳು ಕಂಡುಬಂದ ಪುರುಷರು ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ.
ವೀರ್ಯಾಣುಗಳ ಕೊರತೆಯಲ್ಲದೆ ಪುರುಷರಲ್ಲಿ ನಿಷ್ಫಲತೆಗೆ ಹಲವಾರು ಕಾರಣಗಳಿವೆ. ವೃಷಣಗಳಿಗೆ ಪೆಟ್ಟು ಬಿದ್ದಿರುವುದು, ಪ್ರೋಟೀನ್ ಗಳ ಕೊರತೆ, ವೃಷಣ ಭಾಗಕ್ಕೆ ಹೆಚ್ಚಿದ ಒತ್ತಡ ಹಾಗೂ ಹೆಚ್ಚಿನ ಶಾಖ, ಅಗತ್ಯಕ್ಕಿಂತ ಹೆಚ್ಚಿನ ದೈಹಿಕ ಕಸರತ್ತು. ..ಇತ್ಯಾದಿ ಕಾರಣ ಇರಬಹುದು.
ಪುರುಷತ್ವಕ್ಕೆ ಸವಾಲಾಗಿರುವ ವೀರ್ಯ ಕೊರತೆಯ ಕಾರಣದಿಂದ ವಿವಾಹ ಸಂಬಂಧಗಳು ಮುರಿದು ಬೀಳುವ ಮುನ್ನ ಎಚ್ಚೆತ್ತುಕೊಂಡು ಮುಜುಗರ ಬಿಟ್ಟು ಧೈರ್ಯವಾಗಿ ಪರಿಹಾರಗಳತ್ತ ಗಮನ ಹರಿಸುವುದು ಒಳ್ಳೆಯದು. ಫಲವತ್ತತೆ ಹೆಚ್ಚಿಸಿಕೊಳ್ಳಲು ಕೆಲ ನೈಸರ್ಗಿಕ ಉಪಾಯಗಳು ಇಲ್ಲಿವೆ:
* ವೀರ್ಯಕ್ಕೆ ತೊಂದರೆಯಾಗದಂತೆ ದೇಹದ ಅಂಗವನ್ನು ರಕ್ಷಿಸಿಕೊಳ್ಳುವುದು ಸರಳ ಹಾಗೂ ಉತ್ತಮವಾದ ಪರಿಹಾರ ಎನ್ನಬಹುದು. ಅತಿ ಬಿಗಿಯಾದ ಒಳ ಉಡುಪು ಅಥವಾ ಪ್ಯಾಂಟ್ ಧರಿಸುವುದರಿಂದ ವೃಷಣಕ್ಕೆ ತೊಂದರೆಯಾಗುತ್ತದೆ. ಅತಿ ಉಷ್ಣ ನೀರಿನಲ್ಲಿ ಸ್ನಾನ ಮಾಡುವುದು ಹಾಗೂ ಹಬೆ ಸ್ನಾನದಲ್ಲಿ ಹೆಚ್ಚು ಕಾಲ ಕಳೆದು ನಂತರ ತಣ್ಣೀರಿನಲ್ಲಿ ಸ್ನಾನ ಮಾಡುವುದು ವೀರ್ಯ ಸಂಖ್ಯೆಯನ್ನು ಕಡಿಮೆಗೊಳಿಸುತ್ತದೆ.
* ಫಲವತ್ತತೆ ಹೆಚ್ಚಿಸಲು ದೇಹ ತೂಕ ಇಳಿಸುವುದು ಅಗತ್ಯ. ಸ್ಥೂಲಕಾಯವುಳ್ಳವರು ದೇಹದಲ್ಲಿ ಹೆಚ್ಚಿರುವ ಕ್ಯಾಲೋರಿಗಳನ್ನು ಹೊರ ಹಾಕಲೇಬೇಕು. ಇಲ್ಲದಿದ್ದರೆ ಟೆಸ್ಟೋಟೆರೊನ್ ಅಸಮತೋಲನ ಉಂಟಾಗುತ್ತದೆ. (ಸಸ್ತನಿಗಳಲ್ಲಿ ಪ್ರಚೋದಕ ಹಾರ್ಮೋನ್ ಆಗಿ ಕೆಲಸ ನಿರ್ವಹಿಸುವ Testosterone ಏರು ಪೇರಾದರೆ ಪುರುಷತ್ವದ ಸಂಕೇತಗಳು ಕ್ಷೀಣಿಸುತ್ತವೆ. ಸಂತಾನ ಪಡೆಯಲು ಎಷ್ಟು ಬೀಜ ಹೊರ ಸೂಸಿದರೂ ಫಲ ದೊರೆಯುವುದಿಲ್ಲ). ಸ್ಥೂಲಕಾಯದ ಹೆಂಗಸರು ಗರ್ಭ ಧರಿಸುವ ಸಂಖ್ಯೆ ಕಡಿಮೆಯಾಗಿರುವುದು ಇದೇ ಕಾರಣಕ್ಕೆ.
* ಹಸ್ತ ಮೈಥುನ ಕೂಡಾ ನಿಷ್ಫಲತೆಗೆ ಕಾರಣ ಎನ್ನಬಹುದು. ಹಸ್ತ ಮೈಥುನ ನೀತಿ ಬಾಹಿರ ಕೃತ್ಯವಲ್ಲ, ಅದರಿಂದ ವೀರ್ಯ ನಾಶವಾಗುವುದಿಲ್ಲ ಎಂಬ ವಾದವಿದ್ದರೂ, ಹಸ್ತ ಮೈಥುನ ಮಾಡಿ ಸಂತುಷ್ಟಗೊಂಡ ಮನಸ್ಸು ಮತ್ತೆ ಪ್ರೇಯಸಿಯ ತೆಕ್ಕೆಗೆ ಬಿದ್ದು ಸುಖ ಪಡುವುದು ಕಷ್ಟ. ವೀರ್ಯದ ಹನಿಯೊಂದು ಉತ್ಪತ್ತಿಯಾಗಲು ಉತ್ತಮ ಪ್ರೋಟೀನ್ ವುಳ್ಳ ಒಂದು ತುಂಡು ಬ್ರೆಡ್ ಸಾಕು. ಅಲ್ಲದೆ ಸಾವಿರಾರು ವೀರ್ಯಾಣುಗಳು ಸ್ತ್ರೀಯ ಯೋನಿ ಹೊಕ್ಕರೆ ಫಲ ನೀಡುವುದು ನಾಲ್ಕಾರು ವೀರ್ಯಾಣುಗಳು ಮಾತ್ರ. ಆದ್ದರಿಂದ, ವೀರ್ಯ ಸ್ಖಲನ ಕೂಡಾ ದಿನಗಳ ಲೆಕ್ಕದಲ್ಲಿ ಗ್ಯಾಪ್ ಕೊಡುವುದು ಒಳಿತು. ಹೆಚ್ಚು ದಣಿದಿದ್ದಾಗ ಸಂಭೋಗ ಕ್ರಿಯೆ ಕೂಡದು. ಇದರಿಂದ ವೀರ್ಯಾಣು ಉತ್ಪಾದಿಸಲು ವೃಷಣದ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ರಾತ್ರಿ ಕಳೆದು ಬೆಳಕು ಹರಿಯುವ ಮುನ್ನ, ಮಧ್ಯಾಹ್ನದ ಕಳೆದು ಸಂಜೆಯಾಗುವ ಮುನ್ನ ಸಮಯ ರತಿಕ್ರೀಡೆಗೆ ಸೂಕ್ತ ಎನ್ನುತ್ತಾರೆ ತಜ್ಞರು.
* ಮಾನಸಿಕ ಒತ್ತಡ ಕೂಡಾ ನಿರ್ವೀಯತೆಗೆ ಕಾರಣವಾಗಬಹುದು. ಒತ್ತಡ ತಗ್ಗಿಸಿಕೊಳ್ಳಲು ವೀರ್ಯ ವೃದ್ಧಿಗಾಗಿ ಯೋಗಾಭ್ಯಸ ಮಾಡುವುದು ಉತ್ತಮ ಪರಿಹಾರ. ಮಾನಸಿಕ ಒತ್ತಡದ ಜೊತೆಗೆ ವೀರ್ಯ ಕೊರತೆ ನಿಮ್ಮನ್ನು ಕಾಡುವಾಗ ಸರಿಯಾದ ಸಂಭೋಗ ಕೂಡಾ ಸಾಧ್ಯವಾಗದೇ ಹೋಗಬಹುದು. ವೈದ್ಯರ ಸಲಹೆಯಂತೆ ಕಿಬ್ಬೊಟ್ಟೆಗೆ ಅನುಕೂಲಕರವಾದ ದೈಹಿಕ ಕಸರತ್ತುಗಳನ್ನು ಮಾಡಬಹುದು.
* ಸರಸದಲ್ಲಿ ಸರದಾರ ಎನಿಸಬೇಕಾದರೆ ಮೊಟ್ಟ ಮೊದಲು ಮಾದಕ ದ್ರವ್ಯಗಳನ್ನು ದೂರವಿಡಿ. ಧೂಮಪಾನ, ಅಧಿಕವಾಗಿ ಆಲ್ಕೋಹಾಲ್ ಸೇವನೆ, ಡ್ರಗ್ಸ್ ಚಟ ಹತ್ತಿಸಿಕೊಂಡವರ ಹತ್ತಿರ ಫಲವತ್ತತೆಯ ಭಾಷಣ ಮಾಡುವುದು ನಿಷ್ಪ್ರಯೋಜನಕಾರಿ. ಹೆಚ್ಚಿನ ಪ್ರೋಟೀನ್ ಉಳ್ಳ ತಿನಿಸುಗಳನ್ನು ತಿನ್ನಿ, ಕೆಫೈನ್, ಮತ್ತು ಬರಿಸುವ ಪಾನೀಯ ಹಾಗು ಅಧಿಕ ಮಸಾಲೆ ಭರಿತ ತಿಂಡಿಗಳನ್ನು ಆದಷ್ಟು ಕಮ್ಮಿ ಮಾಡಿ. ನೈಸರ್ಗಿಕ ಆಹಾರಕ್ಕೆ ಶರಣಾದರೆ, ವೀರ್ಯ ಸಂಖ್ಯೆ ತಾನೇ ತಾನಾಗಿ ವೃದ್ಧಿಸುತ್ತದೆ.
ಕೆಳ ಕೊಂಡಿ: ಒಂದು ವೀರ್ಯಾಣುವಿನಲ್ಲಿ 37 MB ಯಷ್ಟು DNA ಮಾಹಿತಿ ಅಡಕವಾಗಿರುತ್ತದೆ. ಸ್ಖಲನವಾಯಿತೆಂದರೆ 3 ಸೆಕೆಂಡುಗಳಲ್ಲಿ 1587 TB ನಷ್ಟು ಮಾಹಿತಿ ರವಾನಿಸಿದ್ದಂತಾಗುತ್ತದೆ. ಹೀಗಿರುವಾಗ ಡಾಟಾ ಟಾನ್ಸ್ ಫರ್ ಮಾಡುವುದರಲ್ಲಿ ಗೂಗಲ್ ಅತ್ಯಂತ ವೇಗ ಎನ್ನುವುದು ಎಷ್ಟು ಸರಿ?!