ಆರೋಗ್ಯಕರ ಸೆಕ್ಸ್ ಹೊಂದುವುದರಿಂದ ಶ್ವಾಸಕೋಶ ಹಾಗೂ ಹೃದಯಸಂಬಂಧಿ ಕಾಯಿಲೆಗಳು ಹತ್ತಿರ ಸುಳಿಯಲು ಹೆದರುತ್ತವೆ. ಸಂಶೋಧನೆಯ ಪ್ರಕಾರ, ಸಕ್ರಿಯವಾಗಿ ಕಾಮಕೇಳಿಯಲ್ಲಿ ತೊಡಗಿಸಿಕೊಂಡಿರುವ ಪುರುಷರು ಏಕ ಸಂಗಾತಿಗೆ ಬದ್ಧರಾಗಿದ್ದರೆ ಅವರಿಗೆ ಹೃದಯದ ಸಮಸ್ಯೆ ಎದುರಾಗುವುದಿಲ್ಲ ಹಾಗೂ ಲವಲವಿಕೆಯಿಂದ ಕೂಡಿದ ಜೀವನ ನಡೆಸಲು ಸಾಧ್ಯ ಎಂದು ತಿಳಿದು ಬಂದಿದೆ.
ಸಂಭೋಗ ಕ್ರಿಯೆ ಹೆಚ್ಚಿಸಿದ್ದಂತೆಲ್ಲಾ ಟೆಸ್ಟೋಸ್ಟಿರೊನ್ ಹಾರ್ಮೋನ್ ಉತ್ಪತ್ತಿ ಹೆಚ್ಚಾಗುತ್ತದೆ. ಸಸ್ತನಿಗಳಲ್ಲಿ ಪ್ರಚೋದಕ ಹಾರ್ಮೋನ್ ಆಗಿ ಕೆಲಸ ನಿರ್ವಹಿಸುವ Testosterone ಏರು ಪೇರಾದರೆ ಪುರುಷತ್ವದ ಸಂಕೇತಗಳು ಕ್ಷೀಣಿಸುತ್ತವೆ. ಈ ಹಾರ್ಮೋನ್ ಹೆಚ್ಚುವುದರಿಂದ ಮಾನಸಿಕ ಒತ್ತಡ ಕಮ್ಮಿಯಾಗುತ್ತದೆ ಹಾಗೂ ಶ್ವಾಸಕೋಶದ ಕ್ರಿಯೆ ಸರಾಗವಾಗಿರುತ್ತದೆ. ಜೀವರಾಸಾಯನಿಕ ಕ್ರಿಯೆ(metabolism) ಉತ್ತಮವಾಗುತ್ತದೆ ಎಂದು ಜನ್ನಿನಿ ಎಂದು ವೈದ್ಯಕೀಯ ವಿಜ್ಞಾನಿ ಹೇಳುತ್ತಾರೆ.
ಆದರೆ, ಸಂಗಾತಿಗೆ ಕೈ ಕೊಟ್ಟು ಲಂಪಟರಾಗಿ ಕಾಮಕ್ರೀಡೆಯಲ್ಲಿ ದಣಿಯುವ ಗಂಡಸರಿಗೆ ಹೃದಯ ಸಂಬಂಧಿ ಕಾಯಿಲೆ ವಕ್ಕರಿಸುವ ಅಪಾಯ ಹೆಚ್ಚು ಎನ್ನಲಾಗಿದೆ. ದಾಂಪತ್ಯದ್ರೋಹ ಮಾಡಿದ ಫಲವಾಗಿ ರತಿಸುಖವನ್ನು ಪೂರ್ಣವಾಗಿ ಸವಿಯಲು ಆಗುವುದಿಲ್ಲ ಹಾಗೂ ಮಾನಸಿಕ ಒತ್ತಡವೂ ಹೆಚ್ಚಾಗುತ್ತದೆ. ಒತ್ತಡ ಹೆಚ್ಚಾದರೆ ಆಯಸ್ಸು ಕ್ಷೀಣಿಸತೊಡಗುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಟೆಸ್ಟೋಸ್ಟಿರೊನ್ ಹಾರ್ಮೋನ್ ಹೆಚ್ಚೆಚ್ಚು ಉತ್ಪತ್ತಿಯಾಗುವುದರಿಂದ ದೇಹದಲ್ಲಿರುವ ಹೆಚ್ಚಿನ ಸಕ್ಕರೆ ಅಂಶವೂ ನಶಿಸುತ್ತದೆ ಇದರಿಂದ ಡಯಾಬಿಟಿಸ್, ಹೃದಯಾಘಾತ ಮುಂತಾದವುಗಳನ್ನು ದೂರವಿರಿಸಬಹುದು ಎಂದು ಜನ್ನಿನಿ ಹೇಳುತ್ತಾರೆ.
ಆರೋಗ್ಯಕರ ಸೆಕ್ಸ್ ಜೀವನ ಈ ಮೂಲಕ ಮಧುಮೇಹದಿಂದ ಬಳಲುತ್ತಿರುವವರಿಗೂ ಅನುಕೂಲ ಹಾಗೂ ಪ್ರೊಸ್ಟೇಟ್ ತೊಂದರೆ ನಿವಾರಣೆಗೂ ಸಹಕಾರಿ ಎಂದು ಇಟಲಿಯ ಸೆಕ್ಸುಯಲ್ ಮೆಡಿಸಿನ್ ಸೊಸೈಟಿಯ ವಿಜ್ಞಾನಿಯಾದ ಜನ್ನಿನಿ ಹೇಳಿದ್ದಾರೆ.
ಪ್ರೊಸ್ಟೇಟ್ ಗ್ರಂಥಿ: ಮೂತ್ರಕೋಶದ ಕೆಳಗೆ ಮೂತ್ರನಾಳವನ್ನು ಆವರಿಸಿಕೊಂಡಿರುತ್ತದೆ. ಪ್ರೊಸ್ಟೇಟ್ ಗಾತ್ರ ಹೆಚ್ಚಾದಂತೆ ಮೂತ್ರನಾಳದ ಮೇಲೆ ಒತ್ತಡ ಹೆಚ್ಚಾಗಿ ಮೂತ್ರ ವಿಸರ್ಜನೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಬಿನೈನ್ ಪ್ರೊಸ್ಟೇಟಿಕ್ ಹೈಪರ್ ಟ್ರೋಪಿ(ಬಿಪಿಎಚ್) ಎಂದು ಸಹ ಪ್ರೊಸ್ಟೇಟ್ ಸಮಸ್ಯೆಗೆ ಕರೆಯಲಾಗುತ್ತದೆ. ಸಾಮಾನ್ಯವಾಗಿ 60ಕ್ಕಿಂತ ಹೆಚ್ಚು ವಯಸ್ಸಿನ ಪುರುಷರಲ್ಲಿ ಈ ಸಮಸ್ಯೆ ಎದುರಾಗುತ್ತದೆ. ಆರೋಗ್ಯಕರ ರತಿ ಸುಖವನ್ನು ಸಕ್ರಿಯವಾಗಿ ತೊಡಗಿಸಿಕೊಂಡರೆ ಇಳಿವಯಸ್ಸಿನಲ್ಲಿ ಈ ರೀತಿಯ ಸಮಸ್ಯೆಗಳಿಂದಲೂ ದೂರವಿರಬಹುದು. [ಕಾಮಸೂತ್ರ]