ಆದರೆ, ಈ .xxx ಡೊಮೇನ್ ಹೆಸರನ್ನು ನೀಡುವುದನ್ನು ಅನೇಕ ರಾಷ್ಟ್ರಗಳು ಮುಕ್ತಕಂಠದಿಂದ ಶ್ಲಾಘಿಸಿವೆ. ಕೆಲ ರಾಷ್ಟ್ರಗಳು ಬೇಕಾಬಿಟ್ಟಿ ನೆನ್ಸಾರ್ ಶಿಪ್ ಜಾರಿಗೆ ತಂದಿದ್ದರಿಂದ ಇಂಟರ್ನೆಟ್ ವ್ಯಾಪಾರಕ್ಕೆ ಭಾರೀ ಪೆಟ್ಟು ಬೀಳುತ್ತಿದೆ ಎಂದು ಕ್ಯಾತೆ ತೆಗೆದಿದ್ದವು. ಈಗ .xxx ಡೊಮೇನ್ ಗೆ ಅನುಮೋದನೆ ನೀಡುವ ಮುಖಾಂತರ ಇಂಟರ್ನೆಟ್ ಕೆಂಪು ದೀಪದ ಪ್ರದೇಶದ ಪರಿಕಲ್ಪನೆ ಜಾರಿಗೆ ತಂದಿರುವುದರಿಂದ ಅಶ್ಲೀಲ ವೆಬ್ ಸೈಟುಗಳನ್ನು ಸಲೀಸಾಗಿ ಪತ್ಯೇಕಿಸಬಹುದಾಗಿದೆ.
ಭಾರತದಲ್ಲಿ ಪರಿಸ್ಥಿತಿಯೇ ಬೇರೆ ಇದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಪ್ರಕಾರ, ಅಶ್ಲೀಲ ವೆಬ್ ಸೈಟುಗಳನ್ನು ನೋಡಲು ಅವಕಾಶವಿದ್ದರೂ ಅಶ್ಲೀಲ ಮಾಹಿತಿಯನ್ನು ರವಾನೆ ಮಾಡುವುದು ಅಪರಾಧ ಮತ್ತು ದಂಡನೀಯ. ಈಗಿರುವ ಕಾಯ್ದೆ ಕಾನೂನಿನ ಪ್ರಕಾರ ಶೀಲ ಮತ್ತು ಅಶ್ಲೀಲ ಅಂತರ್ಜಾಲ ತಾಣಗಳನ್ನು ಪ್ರತ್ಯೇಕಿಸುವುದು ತುಂಬಾ ಕಷ್ಟಕರವಾದ್ದರಿಂದ ಐಸಿಎಎನ್ಎನ್ ನೀತಿಯನ್ನು ಒಪ್ಪಿಕೊಳ್ಳುವುದು ಜಾಣತನ ಎಂಬುದು ಕೆಲ ಕಾನೂನು ತಜ್ಞರ ಅಭಿಪ್ರಾಯ.
ಭಾರತದ ಇಂಟರ್ನೆಟ್ ಸೇವೆ ನೀಡುವವರ ಸಂಘಟನೆಯ ಅಧ್ಯಕ್ಷ ರಾಜೇಶ್ ಚಾರಿಯಾ ಅವರ ಪ್ರಕಾರ, ಅಶ್ಲೀಲ ತಾಣಗಳಿಗೆ .xxx ಡೊಮೇನ್ ನೀಡುವುದರಿಂದ ಮಕ್ಕಳನ್ನು ಅಶ್ಲೀಲ ವೆಬ್ ತಾಣ ನೋಡದಂತೆ ಹತೋಟಿಯಲ್ಲಿ ಇಟ್ಟುಕೊಳ್ಳಲು ಅನುಕೂಲವಾಗುತ್ತದೆ. ಇದು ಕಚೇರಿಗಳಲ್ಲಿ ಕೂಡ ವಯಸ್ಕರ ವೆಬ್ ತಾಣ ನೋಡದಂತೆ ನಿಯಂತ್ರಣ ತರಲು ಸಹಕಾರಿಯಾಗುತ್ತದೆ.