ಇನ್ನು ಲೈಂಗಿಕ ಪಂಡಿತರು ಬಿಟ್ಟಾರೆಯೆ? ಎಲ್ಲ ಕದಗಳನ್ನೂ ಇಕ್ಕಿದ ಕತ್ತಲೆ ಕೋಣೆಯೊಳಗೆ ಮಿಲನ ಮಹೋತ್ಸವ ನಡೆಯುತ್ತಿರುವಾಗ ಗಂಡು ಹೆಣ್ಣಿನ ಮಿದುಳಿನಲ್ಲಿ ಏನು ನಡೆಯುತ್ತಿರುತ್ತದೆ, ಯಾರ ಮಿದುಳು ಯಾವ ರೀತಿ ತರ್ಕಬದ್ಧವಾಗಿ ಚಿಂತಿಸುತ್ತದೆ ಎಂದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಬ್ಬರು ಥೀಸಿಸ್ ಬರೆದು ಶಭಾಶ್ ಗಿರಿ ಗಿಟ್ಟಿಸಿದ್ದಾರೆ.
ರಾಸಲೀಲೆಗೆ ಸಂಬಂಧಿಸಿದಂತೆ ಎಲ್ಲಾ ಭಾಷೆಗಳಲ್ಲಿ ಟನ್ನುಗಟ್ಟಲೆ ಪುಸ್ತಕಗಳು ಸಿಗುತ್ತವೆ. ಈಗ ನಾಲ್ಕು ಸಿಕ್ರೆಟ್ಟುಗಳನ್ನು ಪಾಲಿಸಿದರೆ ಮರೆಯಲಾಗದ ಕಾಮಸಂತೃಪ್ತಿ ನಿಮ್ಮದಾಗಿದೆ ಎಂದು ಬರೆದು ಪುಸ್ತಕದ ಸೊಂಟಕ್ಕೆ ಕಟ್ಟಿದ ಲಾಡಿಯನ್ನು ಬಿಚ್ಚಿದ್ದಾರೆ ಅರ್ಥಾತ್ ಬಿಡುಗಡೆ ಮಾಡಿದ್ದಾರೆ. ದೇಹದ ಆಟಕ್ಕಾಗಿ ಮನಸಿಗೆ ಯಾವ ರೀತಿ ಪಾಠ ಮಾಡಬೇಕೆಂಬ ಗುಟ್ಟುಗಳನ್ನು ರಟ್ಟು ಮಾಡಿದ್ದಾರೆ.
ಕಾಮಕೇಳಿ ಎಂಬುದು ಮನಸಿಗೆ ಸಂಬಂಧಿಸಿದ್ದಾದರೂ, ದೇಹಗಳು ಯಾವ ರೀತಿ ಅಣಿಯಾಗಬೇಕು, ಏನು ಮಾಡಿದರೆ ಲೈಂಗಿಕ ಸುಖದ ಗೌರಿ ಶಿಖರವನ್ನು ಏರಬಹುದು ಎಂಬಿತ್ಯಾದಿ 'ರಹಸ್ಯ'ಗಳನ್ನು 'ಅದ್ಭುತ ಕಾಮಕೇಳಿಗೆ 4 ರಹಸ್ಯಗಳು' ಎಂಬ ಪುಸ್ತಕದಲ್ಲಿ ಜಾರ್ಜಿಯಾ ಫಾಸ್ಟರ್ ಮತ್ತು ಆನಿ ಫಾಸ್ಟರ್ ಎಂಬಿಬ್ಬರು ರೋಚಕವಾಗಿ ಬರೆದಿದ್ದಾರೆ.
1ನೇ ರಹಸ್ಯ - ಪ್ರೇರೇಪಿಸು : ಮಿಲನ ಮಹೋತ್ಸವವೆಂಬುದು ಚಿಟಿಕೆ ಹೊಡೆದಂತಲ್ಲ, ಅದು ಎರಡು ಕೈಗಳಿಂದ ಚಪ್ಪಾಳೆ ಹೊಡೆದಂತೆ. ಹೀಗಾಗಿ ಒಬ್ಬರು ತನ್ನ ಸಂಗಾತಿಯನ್ನು ಕಾಮಕ್ರೀಡೆಗೆ ಸೆಳೆಯುವುದು ಅತೀ ಮುಖ್ಯ. ಈ ರೋಮಾಂಚನ ನಮ್ಮಲ್ಲಿಯೇ ಪ್ರಾರಂಭವಾಗಬೇಕು. ಆಗ ತಾನೆ ಸಂಗಾತಿಯನ್ನು ಪ್ರಣಯದಾಟಕ್ಕೆ ಸೆಳೆಯಲು ಸಾಧ್ಯ. ಅಶ್ಲೀಲತೆ ಸೋಂಕಿರದ ಪೋಲಿ ಮಾತು, ಮತ್ತೇರಿಸುವ ಚುಂಬನ, ಕೆಣಕುವ ನೋಟ ರತಿರಾತ್ರಿಗೆ ಹೂವಿನ ಹಾಸಿಗೆ ಹಾಸುತ್ತವೆ.
2ನೇ ರಹಸ್ಯ - ತೆರೆದ ಇಂದ್ರಿಯಗಳು : ಗಂಡು ಹೆಣ್ಣಿನ ಸಂಗಮವಾಗುವ ಹೊತ್ತಿನಲ್ಲಿ ನಮ್ಮ ಇಂದ್ರಿಯಗಳು ತೆರೆದೇ ಇರಬೇಕು. ಪ್ರಣಯದಾಟದಲ್ಲಿ ಮೈಮರೆಯುವುದರ ಜೊತೆಗೆ ಕಣ್ಣು, ಕಿವಿ, ಮೂಗು, ಬಾಯಿ, ಚರ್ಮಗಳು ತೆರೆದುಕೊಂಡಿರಬೇಕು. ಈ ಟಚ್ಚಲಿ ಏನೋ ಇದೆ, ಕಣ್ಣಂಚಲಿ ಸವಿಮಿಂಚಿದೆ. ಸಂಗಾತಿಗೆ ಎಂಥ ವಾಸನೆ ಇಷ್ಟ, ಎಂಥ ಮಾತುಗಳ ಕಷ್ಟ, ಎಂಥ ಸ್ಪರ್ಶ ನಷ್ಟ ತರುತ್ತದೆ ಎಂಬುದು ತಿಳಿದಿರಬೇಕು. ಇದು ತಿಳಿದಿರದಿದ್ದರೆ ಕಾಮಕ್ರೀಡೆ ಡಲ್ಲೋ ಡಲ್ಲು.
3ನೇ ರಹಸ್ಯ - ಸಮರ್ಪಣೆ : ಮೊದಲೆರಡು ರಹಸ್ಯಗಳ ಪಾಸ್ ವರ್ಡನ್ನು ನಾವು ಯಶಸ್ವಿಯಾಗಿ ಭೇದಿಸಿದಾಗ ಮೂರನೆಯ ರಹಸ್ಯ ದ್ವಾರ ತಾನಾಗಿಯೇ ತೆರೆದುಕೊಳ್ಳುತ್ತದೆ. ಅದು ಸಮರ್ಪಣಾ ಮನೋಭಾವ. ತನ್ನನ್ನು ತಾನು ಸಂಗಾತಿಯ ವಶಕ್ಕೆ ಸಮರ್ಪಿಸಿಕೊಂಡು ಸಿಗುವ ಆನಂದವಿದೆಯಲ್ಲ, ಪದಗಳಲ್ಲಿ ವರ್ಣಿಸುವುದು ಅಸದಳ. ಎರಡು ದೇಹಗಳನ್ನು, ಎರಡು ಜೀವಗಳನ್ನು, ಎರಡು ಮನಸುಗಳನ್ನು, ಎರಡು ಆತ್ಮಗಳನ್ನು ಬೆಸೆಯುವುದೇ ಈ ಸಮರ್ಪಣಾ ಮನೋಭಾವ.
4ನೇ ರಹಸ್ಯ - ಪ್ರತಿಸ್ಪಂದನೆ : ನಮ್ಮನ್ನು ನಾವು ಸಮರ್ಪಿಸಿಕೊಂಡರೂ ಕೂಡ ಪರಸ್ಪರ ಪ್ರತಿಸ್ಪಂದಿಸದಿದ್ದರೆ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ ಆಗುತ್ತದೆ. ಅವಳ ಆನಂದದಲ್ಲಿ ಅವನು ಲೀನವಾಗುವುದು, ಅವನ ಪಿಸುಮಾತುಗಳಿಗೆ ಅವಳು ಕಿವಿಯಾಗುವುದು ಸಂತೃಪ್ತಿಯ ತುದಿ ಮುಟ್ಟಲು ಇರುವ ಬೀಗದಕೈ. ಸಾಕಪ್ಪಾ ಸಾಕು ಅನ್ನುವುದಕ್ಕಿಂತ ಮಾಡಿದ್ದನ್ನೇ ಮಾಡುವಂತಿರಬೇಕು. ತಮ್ಮಲ್ಲಿ ತಾವು ವಿಶ್ವಾಸವಿಟ್ಟಾಗ ಸಂಗಾತಿ ವಿಶ್ವಾಸ ಗೆಲ್ಲುವುದು ಅಸಾಧ್ಯವೇನಲ್ಲ.