ಈ ಮಾಧುರ್ಯಭರಿತ, ರೋಮ್ಯಾಂಟಿಕ್ ಹಾಡುಗಳ ಮೋಡಿಯೇ ಅಂತಹುದು. ಸಮ್ಮೋಹನಾಸ್ತ್ರ ಬೀಸಿದಂತೆ ಈ ಹಾಡುಗಳು ಕಾಮದ ಬಲೆಗೆ ಪ್ರೇಮಿಗಳನ್ನು ಬೀಳಿಸುತ್ತವೆ. ಲಾಲಿಸುತ್ತವೆ, ಅನುರಾಗದ ಅಲೆಯ ಮೇಲೆ ತೇಲಿಸುತ್ತವೆ, ಜಗತ್ತನ್ನೇ ಮರೆತು ಒಂದಾಗುವಂತೆ ಕಾಮಾಸ್ತ್ರ ಬೀಸುತ್ತವೆ. ಸುಯ್ದಾಡುವ ತಂಗಾಳಿ ಮರೆಯಾಗಿರುತ್ತದೆ, ಮಿಟುಕಿಸದೆ ನೋಡುತಿಹ ಶಶಿ ಗಿಡಗಳ ಹಿಂದೆ ಕಾಣೆಯಾಗುತ್ತಾನೆ, ಉಸಿರಲಿ ಉಸಿರು ಬೆರೆತು ಕಾಮಜ್ವಾಲೆ ಧಗಧಗನೆ ಉರಿಯಲು ಪ್ರಾರಂಭಿಸುತ್ತದೆ.
ಬೇಕಿದ್ದರೆ, ಪ್ರೇಮದ ಸುನಾಮಿ ಎಬ್ಬಿಸುವಂಥ, ಕಾಮೋನ್ಮಾದ ಅಲೆಯ ಮೇಲೆ ತೇಲಿಸುವಂಥ ಕನ್ನಡದ ರೋಮ್ಯಾಂಟಿಕ್ ಚಿತ್ರಗೀತೆಗಳನ್ನು ಪಟ್ಟಿ ಮಾಡಿಕೊಳ್ಳಿ. ಮುನಿಸಿಕೊಂಡ ನಲ್ಲೆ ಸರಸ ಒಲ್ಲೆ ಎನ್ನುವಾಗ, ಆಕೆಯನ್ನು ಒಲಿಸಿಕೊಳ್ಳಬೇಕೆನಿಸಿದಾಗ "ನಿಲ್ಲೆ ನೀ ನಲ್ಲೆ ಒಲ್ಲೆಯಾ ಸರಸವನು, ಬಲ್ಲೆ ನಾ ಎಲ್ಲ..." ಗೀತೆ ಮ್ಯೂಸಿಕ್ ಸಿಸ್ಟಂನಲ್ಲಿ ಹಾಕಿ ಅಥವಾ ನೀವೇ ಗುನುಗುನಿಸಲು ಪ್ರಾರಂಭಿಸಿ. ವಿರಸ ಮರೆತು ಸರಸಕೆ ನಿಮ್ಮಾಕೆ ಬರದಿದ್ದರೆ ನನ್ನಾಣೆ.
ಸೀರೆಯುಟ್ಟು, ಮಲ್ಲಿಗೆ ತೊಟ್ಟು, ಕೈಬಳೆಗಳನ್ನು ಖಣಖಣಿಸುತ, ಗೆಜ್ಜೆ ಕಾಲ್ಗಳ ದನಿಯ ತೋರುತ, ಲಜ್ಜೆಯಿಂದ ಬರುವ ಹೆಂಡತಿ ಕ್ಷಣಾರ್ಧದಲ್ಲಿ ಈ ಹಾಡುಗಳನ್ನು ಕೇಳಿ ನಿಮ್ಮ ಕೈವಶವಾಗಿರುತ್ತಾಳೆ. ಆಮೇಲೆ ಮಲ್ಲಿಗೆ ಹಾಸಿಗೆಯ ಮೇಲೆ ಉದುರಿರುತ್ತದೆ, ಬಳೆ ಗೆಜ್ಜೆಗಳು ನಿನಾದ ನಿಲ್ಲಿಸಿರುತ್ತವೆ, ಲಜ್ಜೆ ಮಾಯವಾಗಿರುತ್ತದೆ, ತೊಟ್ಟ ಸೀರೆ ನೀರೆಯ ಎದೆಯ ಮೇಲಿಂದ ಜಾರುಬಂಡೆಯಾಟವಾಡಿರುತ್ತದೆ... ಮೆಲ್ಲನೆಯ ದನಿಯಲ್ಲಿ ಹಾಡು ಬರುತ್ತಲೇ ಇರಲಿ, ನೀವು ಜಗದ ದುಮ್ಮಾನಗಳನ್ನೆಲ್ಲ ಮರೆತು ಸುಖವನ್ನು ಹೊದ್ದುಕೊಂಡುಬಿಡಿ.
ಈ ಪ್ರೇಮಗೀತೆಗಳು ನಿಮಗಿಷ್ಟವೆ?
* ಚಿನ್ನ ಬಾಳಲ್ಲಿ ಈ ರಾತ್ರಿ ಬರದು ಇನ್ನೆಂದು, ಹೂಮಂಚ ನಮಗಾಗಿದೆ...
* ಈ ಬಿಂಕ ಬಿಡುಬಿಡು ನಾನಿನ್ನ ಬಲ್ಲೆನು, ಮನಸನ್ನು ಕೊಡುಕೊಡು ನಾನಿಲ್ಲೆ ನಿಲ್ಲುವೆನು...
* ಚಳಿಚಳಿ ತಾಳೆನು ಈ ಚಳಿಯಾ ಆಹಾ, ಓಹೋ...
* ನಾಚಿಕೆ ಇನ್ನೇಕೆ ಅಂಜಿಕೆ ಇನ್ನೇಕೆ ನಾನಿಲ್ಲಿ ಇರುವಾಗ, ಮಾತನು ನಿಲ್ಲಿಸು ಸುಮ್ಮನೆ ಪ್ರೀತಿಸು... ಕಿಸ್ ಮಿ ಕಿಸ್ ಮಿ...
* ಒಲವಿನ ತಾರೆ, ಚೆಲುವಿನ ಧಾರೆ, ಭಾಮೆಯೆ ಬಾರೆ ಅಗಲಿರಲಾರೆ...
* ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ ರಂಗನ್ನು ನೋಡಿದೆ ಮೈಮರೆತು ಹಾಡಿದೆ...