ಸಂಪ್ರದಾಯದ ಕಟ್ಟುಪಾಡಿನ ಗೂಡಿನೊಳಗೆ ಹುದುಗಿ ಕುಳಿತಿದ್ದ ಮಹಿಳೆಯರನೇಕರು ಬಿರುಬಿಸಿಲನ್ನೂ ಲೆಕ್ಕಿಸದೆ ಲೈಂಗಿಕ ಆಟಿಕೆಯ ಅಂಗಡಿಗೆ ನುಗ್ಗಿ ಅವಶ್ಯಕವಿರುವ ಟಾಯ್ಸ್ ಗಳನ್ನು ನಿರ್ಭಿಡೆಯಿಂದ ಕೊಳ್ಳುತ್ತಿದ್ದಾರೆ. ಎರಡೇ ವಾರದಲ್ಲಿ ಅಂಗಡಿ ಮುಚ್ಚಿಕೊಂಡು ಹೋಗಬೇಕಾಗಬಹುದೆಂದು ಅನಿಸಿದ ಮಾಲಿಕರಿಗೆ ಭರ್ಜರಿ ಲಾಭದ ಅಚ್ಚರಿಯೋ ಅಚ್ಚರಿ.
ಭಾನುವಾರ, ಸೆಪ್ಟೆಂಬರ್ 4 ವಿಶ್ವ ಲೈಂಗಿಕ ಆರೋಗ್ಯ ದಿನ. ಅಂದು ನಡೆದ ಸೆಮಿನಾರೊಂದರಲ್ಲಿ ಲೈಂಗಿಕ ತಜ್ಞರಾಗಿರುವ ಡಾ. ಡಿ ನಾರಾಯಣ ರೆಡ್ಡಿ ಒಂದು ಇಂಟರೆಸ್ಟಿಂಗ್ ಅಂಶವನ್ನು ಬಯಲು ಮಾಡಿದ್ದಾರೆ. ಅವರ ಪ್ರಕಾರ, ಇಂಥ ಆಟಿಕೆಗಳನ್ನು ಬಹುತೇಕರು ಕುತೂಹಲದಿಂದ ಕೊಳ್ಳುತ್ತಿದ್ದರೆ, ಸಂಗಾತಿ ಇಲ್ಲದವರು ಮತ್ತು ಲೈಂಗಿಕ ತೊಂದರೆಯಿಂದ ಬಳಲುತ್ತಿರುವವರು ಕದ್ದುಮುಚ್ಚಿಯಾದರೂ ಆಟಿಕೆಗಳನ್ನು ಕೊಳ್ಳುತ್ತಿದ್ದಾರೆ.
ಪ್ರತಿಯೊಬ್ಬರಿಗೂ ಲೈಂಗಿಕ ಆಸಕ್ತಿ ಇದ್ದೇ ಇರುತ್ತದೆ. ಕೆಲವರು ಅದರ ಬಗ್ಗೆ ಅಥವಾ ತೊಂದರೆಗಳ ಬಗ್ಗೆ ಮುಚ್ಚುಮರೆಯಿಲ್ಲದೆ ಹೇಳಿಕೊಳ್ಳುತ್ತಾರೆ, ಕೆಲವರು ಒಳಗೊಳಗೇ ಬಚ್ಚಿಟ್ಟುಕೊಂಡು ಕೊರಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಲೈಂಗಿಕ ತಜ್ಞರೇ ಇಂತಹ ಆಟಿಕೆಗಳನ್ನು ಕೊಳ್ಳಲು ಶಿಫಾರಸು ಮಾಡುತ್ತಿದ್ದಾರೆ ಎಂಬುದು ರೆಡ್ಡಿ ವಿಶ್ಲೇಷಣೆ.
"ಅಣ್ಣಾನಗರದಲ್ಲಿ ಇರುವ ಈ ಅಂಗಡಿಯನ್ನು ತೆರೆದಾಗ ವೈಬ್ರೇಟರ್ ಮತ್ತು ಕಾಮಕ್ಕೆ ಅಣಿಗೊಳಿಸುವ ಸಾಧನಗಳನ್ನು ಕೇಳಿದಾಗ ನಾವೇ ನಕ್ಕಿದ್ದಿದೆ. ಆದರೆ, ವೈಬ್ರೇಟರುಗಳಿಗೆ ಬೇಡಿಕೆ ಹೆಚ್ಚಾದಂತೆ ಪರಿಸ್ಥಿತಿಯ ಗಂಭೀರತೆಯೂ ಗಮನಕ್ಕೆ ಬಂದಿತು" ಎಂದು ಅಂಗಡಿಯಲ್ಲಿ ಕೆಲಸ ಮಾಡುವ ಸತೀಶ್ ಕುಮಾರ್ ಅವರ ಅನಿಸಿಕೆ.