ಆದರೂ ಕಾಮನಿಗೆ ಏನೋ ಅರೆಮನಸ್ಸು. ಸ್ವರ್ಗ ಬಾಗಿಲು ತೆರೆದಿದ್ದರೂ ಒಳಗಡೆ ಕಾಲಿಡಲು ಮನಸ್ಸಿರುವುದಿಲ್ಲ. ರತಿಯ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಕೂಡ ನಿರಾಸಕ್ತಿ. ಇಂದು ಸಾಧ್ಯವೇ ಇಲ್ಲವೇನೋ ಎಂಬಂತಹ ಅನ್ಯಮನಸ್ಕತೆ. ಕಾಮನೆ ಹದೆಯೇರುವುದಿಲ್ಲ, ಕಾಮನಬಿಲ್ಲು ಕಮಾನು ಕಟ್ಟುವುದಿಲ್ಲ. ಪ್ರೇಮದ ಕಾರಂಜಿ ಪುಟಿಯುವುದೇ ಇಲ್ಲ.
ಇದಕ್ಕೆಲ್ಲ ಕಾರಣ ಅರಿವಿದ್ದೋ ಅರಿವಿಲ್ಲದೆಯೋ ನಾವಾಗಿಯೇ ಬೆಳೆಸಿಕೊಂಡು ಬಂದ ಕೆಟ್ಟ ಚಟಗಳು. ಕುಡಿಯುವುದು, ಸಿಗರೇಟು ಸೇದುವುದು, ಅತಿಯಾಗಿ ತಿನ್ನುವುದು, ಜೀವಗಳು ಒಂದಾಗುವ ಸಮಯದಲ್ಲಿ ಲ್ಯಾಪ್ ಟಾಪ್ ಆನ್ ಮಾಡುವುದು ಲೈಂಗಿಕ ಜೀವನದ ಮೇಲೆ ಭಾರೀ ದುಷ್ಪರಿಣಾಮ ಬೀರುತ್ತವೆ. ಇದು ಗಂಡು ಮತ್ತು ಹೆಣ್ಣಿಗೆ ಸಮನಾಗಿ ಅನ್ವಯವಾಗುತ್ತದೆ.
ಈ ಚಟಗಳು ರಸಿಕತೆಯ ರಸವನ್ನೇ ಹಿಂಡಿ ಹಿಪ್ಪೆ ಮಾಡಿಬಿಡುತ್ತದೆ. ಮಾನಸಿಕವಾಗಿ ನಮ್ಮನ್ನು ಕುಗ್ಗಿಸಿ ಕಾಮಾಸಕ್ತಿಯನ್ನು ತಗ್ಗಿಸಿಬಿಡುತ್ತದೆ. ಒಂದು ಅಧ್ಯಯನದ ಪ್ರಕಾರ, ಅನಾರೋಗ್ಯಕರ ಚಟಗಳು ಗಂಡಸರಲ್ಲಿ ಶೇ.78ರಷ್ಟು ಮತ್ತು ಹೆಂಗಸರಲ್ಲಿ ಶೇ.91ರಷ್ಟು ಲೈಂಗಿಕಾಸಕ್ತಿಯನ್ನು ಕುಂಠಿತಗೊಳಿಸುತ್ತದೆ. ನಾವು ಎಷ್ಟೇ ಪ್ರಯತ್ನ ಮಾಡಿದರೂ ಪರಿಣಾಮ ಮಾತ್ರ ಶೂನ್ಯವೆ.
ಇನ್ನೇನು ಕಾಮೋತ್ಕಟತೆಯನ್ನು ಮುಟ್ಟುವ ಹಂತ ತಲುಪಿದಾಗ ಸೂಜಿ ಚುಚ್ಚಿದ ಬಲೂನಿನಂತೆ ಎಲ್ಲವೂ ಠುಸ್ಸಾಗಿಬಿಡುತ್ತದೆ. ಸೋತೆ ಎಂಬ ಭಾವ ಮನುಷ್ಯನನ್ನು ಇನ್ನಷ್ಟು ಹಣ್ಣುಗಾಯಿ ನೀರುಗಾಯಿ ಮಾಡುತ್ತದೆ. ಇದು ಪರಸ್ಪರ ಪ್ರೀತಿಗೂ ಹೊಡೆತ ನೀಡುತ್ತದೆ. ಮಾದಕ ವಸ್ತು ಸೇವಿಸುವವರಲ್ಲಿ ಲೈಂಗಿಕ ನಿರಾಸಕ್ತಿಯ ಪ್ರಮಾಣ ಇನ್ನೂ ಅಧಿಕವಾಗಿರುತ್ತದೆ.
ಆರೋಗ್ಯಕರ ಜೀವನಕ್ರಮವನ್ನು ರೂಢಿಸಿಕೊಳ್ಳುವುದೊಂದೇ ಇದಕ್ಕೆ ಸೂಕ್ತ ಪರಿಹಾರ. ಮನಸ್ಸು ಶಾಂತವಾಗಿರಲಿ, ದುಶ್ಚಟಗಳಿಂದ ದೂರವಿರಲಿ. ದಿನನಿತ್ಯದ ವ್ಯಾಯಾಮ, ಆರೋಗ್ಯಕರ ಆಹಾರ ಸೇವನೆಯಿಂದ ಸುಖ ಸಂಸಾರಕ್ಕೆ ಸೂತ್ರಗಳನ್ನು ಕಂಡುಕೊಳ್ಳಲು ಸಾಧ್ಯ. ಮನಸು ಹೃದಯದ ಮಾತು ಕೇಳಿದರು ದೇಹವೂ ಮನಸಿನ ಮಾತನ್ನು ಆಲಿಸುತ್ತದೆ.