ಎಡಿನ್‌ಬರ್ಗ್‌ನಲ್ಲಿರುವ ಕ್ವೀನ್ ಮಾರ್ಗರೆಟ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿರುವ ಅಧ್ಯಯನದ ಪ್ರಕಾರ, 15 ದಿನಗಳ ಕಾಲ ಪ್ರತಿದಿನ, ಗಂಡಸು ಅಥವಾ ಹೆಂಗಸರು ರಾತ್ರಿ ಒಂದು ಗ್ಲಾಸ್ ತಾಜಾ ದಾಳಿಂಬೆ ಹಣ್ಣಿನ ರಸ ಹೀರಿದರೆ, ಟೆಸ್ಟೋಸ್ಟಿರಾನ್ ಹಾರ್ಮೋನ್ ಚಟುವಟಿಕೆ ಜಾಸ್ತಿಯಾಗಿ, ಲೈಂಗಿಕ ಆಸಕ್ತಿ ತಾನಾಗಿಯೇ ಅರಳುತ್ತದೆ.
ಹದಿಹರೆಯದವರು ಮಾತ್ರವಲ್ಲ, ಅರವತ್ತು ವಯಸ್ಸು ಮೀರಿದವರು ಕೂಡ ದಾಳಿಂಬೆ ಹಣ್ಣಿನ ರಸದಿಂದ ಬಾಳನ್ನು ಸರಸಮಯವಾಗಿಸಿಕೊಳ್ಳಬಹುದು. ಸುಮಾರು ಹದಿನೈದು ದಿನಗಳ ಕಾಲ ನಡೆಸಿದ ಅಧ್ಯಯನದಿಂದ ಪುರುಷ ಮತ್ತು ಮಹಿಳೆಯರಲ್ಲಿ ಟೆಸ್ಟೋಸ್ಟಿರಾನ್ ಹಾರ್ಮೋನ್ ಉತ್ಪತ್ತಿಯಾಗುವುದು ಜಾಸ್ತಿಯಾಗಿರುವುದು ಕಂಡುಬಂದಿದೆ.
ಈ ದಾಳಿಂಬೆ ರಸ ಪುರುಷ ಮತ್ತು ಮಹಿಳೆಯರಲ್ಲಿ ಕಾಮೋತ್ತೇಜಕವಾಗಿ ಕೆಲಸ ಮಾಡುವುದು ಮಾತ್ರವಲ್ಲದೆ, ಮೂಳೆ ಮತ್ತು ಸ್ನಾಯುಗಳನ್ನು ಕೂಡ ಸದೃಢ ಮಾಡುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ದಾಳಿಂಬೆ ರಸದ ಸೇವನೆಯಿಂದ ಲೈಂಗಿಕ ಆಸಕ್ತಿ ಕುದುರುವುದು ಮಾತ್ರವಲ್ಲದೆ, ಇದು ನೆನಪಿನ ಶಕ್ತಿ ಮತ್ತು ಮೂಡನ್ನು ಹೆಚ್ಚಿಸುತ್ತದೆ, ಹಾಗು ಒತ್ತಡವನ್ನು ಕಡಿಮೆ ಮಾಡುತ್ತದೆ.
ಇದು ಒಟ್ಟಾರೆ ಆರೋಗ್ಯದ ಮೇಲೆ ಕೂಡ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಮನಸು ಉಲ್ಲಸಿತವಾಗಿ, ಒತ್ತಡ ಕಡಿಮೆಯಾದರೆ ರಕ್ತದೊತ್ತಡ, ಮಧುಮೇಹ, ಹೃದಯಬೇನೆಯಂತಹ ಅನೇಕ ರೋಗಗಳು ಕೂಡ ಇದನ್ನು ಸೇವಿಸುವವರ ಹತ್ತಿರ ಸುಳಿಯುವುದಿಲ್ಲ. ಒತ್ತಡದ ಜೊತೆಗೆ, ಖಿನ್ನತೆ, ಕೋಪ, ತಪ್ಪಿತಸ್ಥ ಭಾವನೆ, ದುಃಖ ಮುಂತಾದವುಗಳ ಮೇಲೆ ಕಡಿವಾಣ ಬೀಳುತ್ತದೆ. ಇದರಿಂದ ಸಹಜವಾಗಿ ಋಣಾತ್ಮಕ ಚಿಂತನೆಗಳು ದೂರವಾಗಿ ಮನಸು ಉಲ್ಲಸಿತವಾಗಿರುತ್ತದೆ. ಇದೇ ಅಲ್ಲವೆ ನಿಜವಾದ ಆರೋಗ್ಯದ ಗುಟ್ಟು?