ಎಲ್ಲ ಮುಂಜಾವುಗಳೂ ಮುಗುಳ್ನಗೆಯಿಂದ ಪ್ರಾರಂಭವಾಗುವುದಿಲ್ಲ, ಎಲ್ಲ ರಾತ್ರಿಗಳೂ ಜೀವನದ ರಸಗಾನ ಹಾಡುವ ಅದ್ಭುತ ಗಳಿಗೆಗಳಾಗಿರುವುದಿಲ್ಲ. ಜೀವನವೆಂದರೆ ಬೆಳಗಾನೆದ್ದು ಹಲ್ಲುಜ್ಜಿ, ಹೆಂಡತಿ ಮಾಡಿಟ್ಟ ತಿಂಡಿ ತಿಂದು, ಡಬ್ಬಿ ಕಟ್ಟಿಸಿಕೊಂಡು ಬೈಕೇರಿ ಆಫೀಸಿಗೆ ಹೋಗಿ ಉಸ್ಸಂತ ಸಂಜೆ ವಾಪಸ್ ಬಂದು ಕಾದು ಕುಳಿತ ಹೆಂಡತಿಯ ಮುಖವನ್ನೂ ಸರಿಯಾಗಿ ನೋಡದೆ ಊಟದ ಶಾಸ್ತ್ರ ಮುಗಿಸಿ ಹಗಲಿಗೆ ಟಾಟಾ ಹೇಳುವುದಲ್ಲ. ಅಲ್ಲಿ ಹೆಂಡತಿಯ ಭಾವನೆಗಳಿವೆ, ಹೃದಯದ ಮಿಡಿತವಿದೆ, ಗಂಡನ ಅಪ್ಪುಗೆಯಲ್ಲಿ ಸಿಗುವ ಅನಿರ್ವಚನೀಯ ಸೌಖ್ಯವಿದೆ, ತುಟಿಯ ನಗುವಿನಲ್ಲಿ ಜೇನಹನಿಯಿದೆ. ಅದನ್ನು ಹೀರುವ, ಅನುಭವಿಸುವ ರಸಿಕತೆ ಗಂಡನಿಗಾಗಲಿ ಅಥವಾ ಹೆಂಡತಿಗಾಗಲಿ ಇರಬೇಕಷ್ಟೆ.
ದೂರದಿಂದ ಬೀಸಿಬರುವ ಸಿಹಿಗಾಳಿ ನಮ್ಮ ಮೈಮನಗಳೊಂದಿಗೆ ಆಡುವ ಸಲ್ಲಾಪ ಪ್ರೇಮಿಗಳಿಗೆ ನೀಡುವ ಜೀವನ ಪಾಠ. ಸರಿಯಾಗಿ ಒಂಬತ್ತು ಗಂಟೆಗೆ ಶುರುವಾಗುವ ಟಿವಿ ಸೀರಿಯಲ್ಲಿನ ಸಮಯಕ್ಕೆ ಮನೆಯೊಳಗೆ ಅಡಿಯಿಡದೆ ಸಂಜೆ ದೀಪ ಹಚ್ಚುವ ಸಮಯಕ್ಕೆ ಡಿಂಗ್ ಡಾಂಗ್ ಬಾರಿಸಿದರೆ ಕೆಂಪು ಸೀರೆ, ಹಿಮಬಿಳಿ ಮಲ್ಲಿಗೆ ತೊಟ್ಟ ಮಡದಿಯ ಮುಖ ಸಾವಿರ ಬಲ್ಬಿನಂತಾಗಿರುತ್ತದೆ. ಕೈಕಾಲು ತೊಳೆದು ಬಾಲ್ಕನಿಯಲ್ಲಿ ಹಾರಾಡುವ ಹೆಂಡತಿಯ ಸೀರೆಯ ಸೆರಗಿನ ಬಣ್ಣದ ಬಣ್ಣನೆ ಮಾಡುವ ನೆಪದಲ್ಲಿ ಸೊಂಟಕ್ಕೆ ತಾಗಿದ ಕಿರುಬೆರಳ ಅಂಚು ಕಾಮನೆಯನ್ನು ಗರಿಗೆದರಿಸಿರುತ್ತದೆ, ಕಾಮನಬಿಲ್ಲು ಹದೆಯೇರುವಂತೆ ಮಾಡಿರುತ್ತದೆ. ತಂತಿಗೆ ಹಾಕಿದ ಬಟ್ಟೆ ಹೆಂಡತಿಯಾಗಿರುತ್ತಾಳೆ, ಆ ಬಟ್ಟೆಯ ಮೂಲೆಮೂಲೆಯಲ್ಲೆಲ್ಲಾ ಸುಳಿದಾಡುವ ರಸಿಕ ಗಾಳಿ ನೀವಾಗಿರುತ್ತೀರಿ.
ಟಚ್ ಮಾಡುವ ಭರದಲ್ಲಿ ದೇಹದ ಭಾಗಗಳನ್ನೆಲ್ಲ ತಡಕಾಡಿಬಿಟ್ಟರೆ ಸ್ಪರ್ಶದಲ್ಲಿರುವ ಮಾಂತ್ರಿಕತೆ ಮಾಯವಾಗಿರುತ್ತದೆ. ಮಾಂತ್ರಿಕತೆಯನ್ನೂ ಮೀರಿದ ಮಾಯಾಜಾಲ ಬೀಸಬೇಕಾದರೆ ತಾಳ್ಮೆ ಬೇಕು, ತನ್ಮಯತೆ ಇರಬೇಕು. ಸಿಹಿಯನ್ನು ಸಾವಕಾಶವಾಗಿ ಸವಿದರೇನೆ ರುಚಿ ತಾನೆ? ಇದಕ್ಕೆ ಮಾನಸಿಕ ಸಿದ್ಧತೆ ಅತಿ ಅವಶ್ಯ. ಸ್ಪರ್ಶ ಕ್ರಿಯೆ ನಿಧಾನವಾಗಿರಲಿ ಮತ್ತು ಜೀವನಸಾಥಿಗೆ ಹಿತವಾಗಿರಲಿ. ಯಾವ ಭಾಗದ ಸ್ಪರ್ಶ ಹೆಚ್ಚು ಆನಂದ ನೀಡುತ್ತದೆ ಎಂಬುದು ನಿಮಗೆ ತಿಳಿದಿರಲಿ. ಸ್ಪರ್ಶಿಸುವುದು ಕೂಡ ಒಂದು ಕಲೆ. ಈ ಕಲೆಗಾರಿಗೆ ಸಿದ್ಧಿಸಿದರೆ ಪ್ರಿಯತಮೆಯ ಮೇಲೆ ಮೋಹದ ಬಲೆ ಬೀಸುವುದು ಅತಿ ಸುಲಭ. ಹಾಸಿಗೆಯ ಮೇಲೆ ಪವಡಿಸಿದ ಹೆಂಡತಿಯನ್ನು ಮೋಹದ ಬಲೆಯಲ್ಲಿ ಬೀಳಿಸುವ ಮುನ್ನ 'ಕೆನ್ನೆಗೆ ಕೆನ್ನೆ ಸೇರುವ ಮುನ್ನ ಕೆಂಪೇಕಾಯಿತು, ಕೆಂದುಟಿ ಜೇನನು ಹೀರುವ ಮುನ್ನ ಭಯವೇಕಾಯಿತು' ಅಂತ ಮೆತ್ತಗೆ ಆಕೆಯ ಕಿವಿಯಲಿ ಉಸುರಿರಿ, ಮುಂದೆ ಏನಾಗುತ್ತದೆಂದು ನೀವೇ ನೋಡಿರಿ. ಪ್ರೀತಿ ಕೆರಳಿರುತ್ತದೆ, ದೇಹ ರೋಮಾಂಚನದ ಹಿಮಾಲಯವೇರಿರುತ್ತದೆ.
ಅಡುಗೆ ಮನೆ ವಿವಿಧಮಯ ತಿಂಡಿ ತಿನಿಸುಗಳನ್ನು ಮಾಡುವ ಪ್ರಯೋಗಾಲಯವಿದ್ದಂತೆ, ಶಯನಗೃಹ ವಿವಿಧಬಗೆಯ ಸುಖಗಳನ್ನು ಕಂಡುಕೊಳ್ಳುವ ಶೃಂಗಾರ ಕಾವ್ಯಾಲಯವಿದ್ದಂತೆ. ಈ ಪ್ರಯೋಗದಲ್ಲಿ ನಿಮ್ಮನ್ನೂ ನಿಮ್ಮ ಜೊತೆಗಾರ್ತಿಯನ್ನು ತೊಡಗಿಸಿಕೊಳ್ಳಿ, ಫಲ ಸಿಕ್ಕೇಸಿಗುತ್ತದೆ.