ಹಾಗೆಯೇ, ಮೊದಲ ಬಾರಿಗೆ ಆ ಚೆಲುವೆಯನ್ನು ನೋಡಿದಾಗ ಆಕೆ ತೊಟ್ಟ ಕೆಂಪು ಹೂವಿರುವ ಬಿಳಿ ಬಣ್ಣದ ಸ್ಕಿನ್ ಟೈಟ್ ಸೆಲ್ವಾರ್ ಕಮೀಜ್, ಪ್ರಥಮ ಬಾರಿಗೆ ಕಾಲೇಜು ಮೆಟ್ಟಲೇರಿದಾಗ ಲಂಗದಾವಣಿಯಲ್ಲಿದ್ದ ತುಂಬುಕೆನ್ನೆಯ ಚೆಲುವೆಯ ಬೆನ್ನ ಕೆಳಗಡೆ ವೇಣಿಯ ತುದಿಯಲಿ ನಲಿದಾಡುತ್ತಿದ್ದ ಕುಚ್ಚು, ಕೊನೆ ಬೆಂಚಿನ ಜೀನ್ಸ್ ಹುಡುಗಿಯ ಸೊಂಟದ ವಿಪರೀತ ಬಳುಕಾಟ, ಏರಿಳಿಯುವ ಎದೆಯ ಕುಲುಕಾಟ, ಪ್ರಥಮ ನೋಟದಲ್ಲೇ ಸೆಳೆದ ಸೀರೆ ಉಟ್ಟ ಸುಂದರಿಯ ಕೋಗಿಲೆಯ ಕಂಠ ಕೂಡ ತುಂಟ ಹುಡುಗರ ನೆನಪಿನಂಗಳದಿಂದ ಎಂದೂ ಅಳಿಸಿಹೋಗುವುದಿಲ್ಲ.
ಹಾಗೆಯೇ, ಆಕೆ ಪ್ರಥಮ ಪ್ರೇಮ ಯಾಚನೆಗೆ ತೋರಿದ ತಿರಸ್ಕಾರ, ಮುಗುಳ್ನಗೆಗೆ ಪ್ರತಿಯಾಗಿ ಮೂತಿ ತಿರುವಿ ಜಡೆ ಬೀಸಿ ಬಳುಕುತ್ತ ಸಾಗಿದ್ದು, ಒಂದು ಬಾರಿ ನೆಟ್ ನೋಟ ಬೀರಿದ್ದಕ್ಕೆ ಕೆಂಗಣ್ಣು ಬೀರಿದ್ದು, ಹೂತಂದ ತಪ್ಪಿಗೆ ಚಪ್ಪಲಿಯತ್ತ ಕಣ್ಣು ಹಾಯಿಸಿದ್ದು, ಹೂಮುತ್ತು ತೂರಿದಾಗ ಕಪಾಳದ ಮೇಲೆ ಕೈಯಾಡಿಸಿದ್ದು ಕೂಡ ಬಿಸಿರಕ್ತದ ಯುವಕರಲ್ಲಿ ಹಸಿ ಸಿಮೆಂಟಿನ ಮೇಲೆ ಅಂಟಿಸಿದ ಹರಳಿನಂತೆ ನೆನಪಿನಲ್ಲುಳಿಯುತ್ತವೆ. ವಯಸ್ಸಾದಂತೆ ಸಂಸಾರದಲ್ಲಿ ಮುಳುಗಿದ ಮೇಲೆ ಈ ನೆನಪುಗಳು ದೂರ ಸಾಗುತ್ತವೆ. ಆದರೆ, ಯುವಕರಲ್ಲಿ ಪ್ರೇಮದ ಸವಿನೆನಪು ಅಥವಾ ತಿರಸ್ಕಾರಗೊಂಡ ಕಹಿನೆನಪು ಅಷ್ಟು ಬೇಗನೆ ಅಳಿದುಹೋಗುವುದಿಲ್ಲ.
ಹರೆಯಕ್ಕೆ ಕಾಲಿಟ್ಟಾಗ, ಕಾಲೇಜು ಮೆಟ್ಟಲೇರಿದಾಗ, ಪಂಜರ ಬಿಟ್ಟು ಸ್ವತಂತ್ರ ಹಕ್ಕಿಯಾಗಿ ಹಾರಾಡಿದಾಗ ಯುವಕ ಅಥವಾ ಯುವತಿಯರ ಮನದಾಳದಲ್ಲಿ ಪ್ರೇಮದ ಆಸೆ ಚಿಗುರುವುದು ಸಹಜ. ಕೆಲವರಲ್ಲಿ ಪ್ರಥಮ ನೋಟದಲ್ಲೇ ತಾವು ಕಂಡ ಹುಡುಗಿಯನ್ನು ಪ್ರೇಮಿಸಲು ಆರಂಭಿಸುತ್ತಾರೆ. ಕೆಲವರಿಗೆ ಪ್ರೇಮಕ್ಕಿಂತ ಆ ಹುಡುಗಿ ನಡೆದುಕೊಂಡ ರೀತಿಯೇ ಹೆಚ್ಚು ಮಧುರವಾಗಿರುತ್ತದೆ. ಪ್ರೇಮ ಪಲ್ಲವಿಸಲಿ ಬಿಡಲಿ ನೆನಪುಗಳು ಮಾತ್ರ ಮಧುರ ಮಧುರ ಮಧುರ.
ಹಳೆ ಆಲ್ಬಂಗಳನ್ನು ತಿರುವಿಹಾಕುವಾಗ, ಪ್ರಥಮ ನೋಟದಲ್ಲೇ ಆಕರ್ಷಿಸಿದ ಆ ಹುಡುಗಿಯ ಭಾವಚಿತ್ರ ಕಂಡಾಕ್ಷಣ, ನೆನಪುಗಳು ಜಾರುಬಂಡೆಯಾಗಿರುತ್ತವೆ, ಆ ಹುಡುಗಿಯನ್ನು ಕಂಡ ಆ ಕ್ಷಣ ಕಣ್ಣ ಮುಂದೆ ಬಂದು ನಿಂತಿರುತ್ತದೆ. ಮುಂದೆ ಅನೇಕ ಸುಂದರಿಯರು ಬಂದು ಹೋಗಬಹುದು. ಆದರೆ ಅಂದು ಮೊದಲ ಬಾರಿಗೆ ಕಂಡ ಲಂಗದ ಹುಡುಗಿಯ ಪ್ರೇಮ ಪುರಸ್ಕಾರವೇ ಆಗಲಿ, ತಿರಸ್ಕಾರವೇ ಆಗಲಿ ಮರೆಯುವುದು ಸಾಧ್ಯವೆ?
ಒಂದು ಅಧ್ಯಯನದ ಪ್ರಕಾರ, ಪ್ರಣಯದ ಯಾಚನೆಗೆ ಮರುಳಾಗುವ ಚೆಲುವೆಯರು ಆಕರ್ಷಕವಾಗಿ ಮತ್ತು ಪ್ರಚೋದನಕಾರಿಯಾಗಿ ಬಟ್ಟೆ ತೊಟ್ಟಿರುತ್ತಾರೆ, ಉಬ್ಬುತಗ್ಗುಗಳ ಪ್ರದರ್ಶನಕ್ಕೆ ಹಿಂದೇಟು ಹಾಕುವುದಿಲ್ಲ, ಲೈಂಗಿಕ ಆಕರ್ಷಣೆಯ ಬಗ್ಗೆ ಸಕಾರಾತ್ಮಕ ಧೋರಣೆ ಹೊಂದಿರುತ್ತಾರೆ. ಇದೇ ಮಾತು ಹುಡುಗರನ್ನು ಮೊದಲ ಬಾರಿಗೆ ನೋಡಿದಾಗ ಹುಡುಗಿಯರು ಅನುಭವಿಸುವ ತೊಳಲಾಟಗಳಿಗೆ, ಆಕರ್ಷಣೆ ಅನಾಕರ್ಷಣೆಗಳಿಗೆ, ಪುರಸ್ಕಾರ ತಿರಸ್ಕಾರಗಳಿಗೆ ಅನ್ವಯವಾಗುತ್ತದೆ.