ಪ್ರೇಮ ಸಲ್ಲಾಸ ಹೇಗೆ ಕಲೆಗಾರಿಕೆಯೋ, ಪ್ರೇಮವನ್ನು ಪ್ರೇಮಿಗೆ ಮನದಟ್ಟು ಮಾಡುವಂತೆ ನಿವೇದಿಸಿಕೊಳ್ಳುವುದು ಮತ್ತು ಸಂಗಾತಿಯನ್ನು ಕಾಮಸಮುದ್ರದಲ್ಲಿ ತೇಲಾಡಿಸುವುದು ಕೂಡ ಒಂದು ಕಲೆಗಾರಿಕೆಯೆ. ಪ್ರೇಮ ತಪಸ್ವಿಗಳಿಗೆ ಒಲಿದಂತೆ ಅದು ಎಲ್ಲರಿಗೂ ಸಿದ್ಧಿಸಿರುವುದಿಲ್ಲ. ಬರೀ ಕನಸಿನ ಪ್ರೇಮಲೋಕದಲ್ಲಿ ಏಕಾಂಗಿಯಾಗಿ ವಿಹರಿಸಿದರೆ ಸಾಲದು, ಆ ಕನಸುಗಳನ್ನು ಸಾಕಾರಗೊಳುವ ತಂತ್ರಗಾರಿಕೆಯೂ ಸಿದ್ಧಿಸಿರಬೇಕು. ಈ ಪ್ರೇಮ ಪಾಠದಲ್ಲಿ ಅನೇಕ ಅಧ್ಯಾಯಗಳಿವೆ. ಅವುಗಳೆಂದರೆ,
ನಾಚಿಕೆ ಇನ್ನೇಕೆ ಅಂಜಿಕೆ ಇನ್ನೇಕೆ : ನಾಚಿಕೆ ಎಂಬ ಬಟ್ಟೆ ಕಳಚದೆ ಸುಲಲಿತವಾಗಿ ರತಿಸುಖದಲ್ಲಿ ತೊಡಗಿಕೊಳ್ಳುವುದು ನಿಜಕ್ಕೂ ಕಷ್ಟದ ಕೆಲಸ. ನಾಚಿಕೆ ಇನ್ನೇಕೆ ಅಂಜಿಕೆ ಇನ್ನೇಕೆ ನಾನಿಲ್ಲಿ ಇರುವಾಗ ಅಂತ ಹಾಡುತ್ತ ನಲ್ಲೆಯನ್ನು ಸಲ್ಲಾಪಕ್ಕೆ ಸೆಳೆಯುವುದು ನಲ್ಲನ ಕೆಲಸ. ಮಾತನು ನಿಲ್ಲಿಸು ಸುಮ್ಮನೆ ಪ್ರೀತಿಸು ಅಂತ ನಾಚಿಕೆ ಬಿಟ್ಟು ನಲ್ಲನನ್ನು ಕೂಡಿಕೊಳ್ಳುವುದು ನಲ್ಲೆಯ ಕರ್ತವ್ಯ. ಕಾಮನೆಯೆಂಬುದು ಸಿಪ್ಪೆಸುಲಿದ ಬಾಳೆಹಣ್ಣಿನಂತಿರಬೇಕು.
ಓ ನಲ್ಲನೆ ಸವಿಮಾತೊಂದ ನುಡಿವೆಯಾ : ಹಾಸಿಗೆ ಮೇಲೆ ಬಿದ್ದಕೂಡಲೆ ಗುರುಗುರು ನಿದ್ದೆಹೊಡೆಯಲು ಶುರು ಮಾಡಬೇಡಿ. ಕೆಲಸ ಬೊಗಸಿ ಮುಗಿಸಿ ಗೆಜ್ಜೆಯ ಸದ್ದು ಮಾಡದೆ ಮೆಲ್ಲನೆ ಹೆಜ್ಜೆ ಇಡುತ್ತ ಬರುವ ಮನದನ್ನೆಯ ಮನದ ಇಂಗಿತ ತಿಳಿದುಕೊಳ್ಳಿ. ನಿಮ್ಮ ಕಲ್ಪನೆಯ ಕನ್ನೆಯ ಚಿತ್ರಣ ಮೂಡಿಸಿ, ಬರಸೆಳೆದ ಮಡದಿಯನ್ನು ಮೂಡಿಗೆ ಎಳೆದುಕೊಂಡು ಬನ್ನಿ. ಯಾವ ರೀತಿ ಸುಖಿಸಲು ಇಷ್ಟಪಡುತ್ತೀರಿ, ಆಕೆ ಯಾವ ರೀತಿ ಸ್ಪಂದಿಸಬೇಕು ಎಂದು ಅರ್ಥವಾಗುವಂತೆ ವಿವರಿಸಿ, ಬೋರು ಹೊಡೆಸದಂತೆ.
ಹೂವಿಗಿಂತ ಚೆಂದ ಈ ನಿನ್ನ ಮೊಗದ ಅಂದ : ಹೊಗಳಿಕೆಯ ಬಲೆಗೆ ಬೀಳದ ನಾರಿ ಯಾರಿದ್ದಾರೆ ಹೇಳಿ? ಮಡದಿ ತಯಾರಿಸಿದ ಅಡುಗೆ, ಆಕೆಯ ಒಳ್ಳೆಯ ಗುಣ, ಉಟ್ಟ ಉಡುಗೆ ತೊಡುಗೆ, ರೂಪ ಲಾವಣ್ಯ, ಆಕೆ ಪ್ರೇಮಿಸುವ ರೀತಿ ಸಾಧ್ಯವಾದಾಗಲೆಲ್ಲ ಹಾಡಿ ಹೊಗಳಿರಿ. ಪ್ರತ್ಯಕ್ಷವಾಗಿಯಲ್ಲದಿದ್ದರೂ, ಪರೋಕ್ಷವಾಗಿಯಾದರೂ ಸಂಗಾತಿಯನ್ನು ಆಕರ್ಷಿಸಲು ಇದು ಸುಲಭದ ಉಪಾಯ. ಹೂವಿಗಿಂತ ಚೆಂದ ಈ ನಿನ್ನ ಮೊಗದ ಅಂದ ಅಂತ ಹಾಡಲು ಶುರುಮಾಡಿದರಂತೂ ಹೆಚ್ಚಿನ ಬೆಣ್ಣೆ ಹಚ್ಚುವ ಅಗತ್ಯವೂ ಇರುವುದಿಲ್ಲ.
ಹೊಸ ಆನಂದ ನೀನಿನ್ನು ತಂದೆ : ಹೊಸ ಬಾಳೆಗೆ ಜೊತೆಯಾದ ಹೆಂಡತಿ ಪ್ರತಿ ರಾತ್ರಿ ಹೊಸದನ್ನು ಬಯಸುತ್ತಾಳೆ. ಪ್ರೀತಿಯಲ್ಲಿ ಹೊಸತಿರಲಿ, ಕಾಮನೆಯಲ್ಲಿ ಹೊಸತಿರಲಿ, ಭಾವಭಂಗಿಗಳಲ್ಲಿಯೂ ಪ್ರತಿ ರಾತ್ರಿ ಹೊಸತನ್ನು ಕಂಡುಕೊಳ್ಳಿ. ಹೊಸ ಆನಂದ ಹೊಸ ಅನುಭವಗಳನ್ನು ಬೆಡ್ ರೂಮ್ ಎಂಬ ಪ್ರೀತಿ, ಪ್ರೇಮ, ಕಾಮದ ಪ್ರಯೋಗಶಾಲೆಯಲ್ಲಿ ಕಂಡುಕೊಳ್ಳಿ. ಪ್ರತಿ ರಾತ್ರಿಯೂ ಮೊದಲ ರಾತ್ರಿಯಂತಿರಲಿ, ಪ್ರತಿ ಬೆಳಗು ಮಿಲನ ಮಹೋತ್ಸವದಿಂದ ಆರಂಭವಾಗಲಿ.