ಗಂಡು ಹಣ್ಣಿನ ಸಮಾಗಮದಲ್ಲಿರುವ ಶಕ್ತಿಯೇ ಅಂತಹುದು. ಛಾವಣಿ ಕಿತ್ತುಹೋಗುವಂತೆ ಜಗಳಗಳಾಗಿದ್ದರೂ ಆ ಹತ್ತು ನಿಮಿಷಗಳ ದೇಹ ಮಾನಸಿಕ ಸಮಾಗಮ ಆ ಆಕಾಶಕ್ಕೇ ಛಪ್ಪರ ಹಾಕಿರುತ್ತದೆ. ಮನಸ್ತಾಪದ ಕಾರ್ಮೋಡ ಕವಿದಿದ್ದರೂ ಕ್ಷಣಾರ್ಧದಲ್ಲಿ ಮಳೆಸುರಿದು ಒಲವಿನ ಹೂಹಾಸಿಗೆ ಹಾಸಿರುತ್ತದೆ. ಸಮಾಗಮವೆಂದರೆ ಸಂಭೋಗವೇ ಆಗಬೇಕಿಲ್ಲ. ಅಲ್ಲಿ ಪ್ರೀತಿಯಿದೆ, ಹುಸಿ ಮುನಿಸಿದೆ, ಜಗಳ, ಮನಸು ಮನಸುಗಳ ಮಿಲನವೂ ಇದೆ.
ಒಂದೇ ಒಂದು ಸ್ಪರ್ಶದಲ್ಲಿ ಅದ್ಭುತ ಮಾಂತ್ರಿಕ ಶಕ್ತಿಯಿರುತ್ತದೆ. ಈ ಚಟ್ಟಲಿ ಏನೋ ಇದೆ ಎಂಬ ಹಾಡು ಕೇಳಿರಬೇಕಲ್ಲ. ಒಂದು ಹೂಮುತ್ತು, ತಡಕಾಟ, ಪ್ರೇಮದ ಹುಡುಕಾಟ, ಕುಲುಕುಲು ನಗು, ಉಸಿರಿನ ಬಿಸಿಬುಗ್ಗೆ, ನವಿರಾದ ಮಾತು, ನೋವಿನ ಹೊರಳಾಟಗಳು ಎಲ್ಲ ಗೊಂದಲಗಳಿಗೆ ಆ ಕ್ಷಣಕ್ಕಾದರೂ ಬೀಗ ಹಾಕಿರುತ್ತದೆ. ದುಗುಡ ದುಮ್ಮಾನಗಳು ಆ ಕ್ಷಣ ಕತ್ತಲಲ್ಲಿ ಕಳೆದುಹೋಗಿರುತ್ತವೆ. ಇದು ಯಾರೋ ಒಬ್ಬರು ಹೇಳಿದ ಮಾತಲ್ಲ. ಸತತ ಅಧ್ಯಯನದಿಂದ ಸಾಬೀತಾದ ಸಂಗತಿ.
ಆದರೆ, ಒಂದು ಮಾತಂತೂ ಸತ್ಯ. ಪ್ರೀತಿಯಲ್ಲಿ ಪ್ರಾಮಾಣಿಕತೆಯಿರಬೇಕು, ಸ್ಪರ್ಶದಲ್ಲಿ ನಯವಂತಿಕೆಯಿರಬೇಕು, ಸಮಾಗಮದಲ್ಲಿಯೂ ಎರಡು ದೇಹ ಒಂದೇ ಮನಸು ಎಂಬಂತಿರಬೇಕು. ಆಗ ಮಾತ್ರ ಪ್ರೇಮದ ಸಾಕ್ಷಾತ್ಕಾರವಾಗಲು ಸಾಧ್ಯ. ಇಂದಿನ ದುಗುಡದಲ್ಲಿ, ಪ್ರತಿನಿತ್ಯ ಇಬ್ಬರೂ ಕೆಲಸ ಮಾಡಬೇಕೆಂಬ ಧಾವಂತದಲ್ಲಿ ಈ ಮಾತುಗಳನ್ನೇ ಮರೆತುಬಿಟ್ಟಿರುತ್ತಾರೆ. ರಾತ್ರಿ ಉಂಡು ಮಲಗುವ ಸಮಯವಿದೆಯಲ್ಲ, ನಮ್ಮಲ್ಲಿ ಏನೇ ಭೇದಗಳಿದ್ದರೂ ಪ್ರೀತಿಯ, ತಾಳ್ಮೆಯ ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳಬೇಕಾದ ಅಮೃತಘಳಿಗೆ.
ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸಲು, ಒಬ್ಬರನ್ನೊಬ್ಬರು ಬಿಟ್ಟಿರಲಾರೆವು ಎಂಬ ಭಾವ ಉತ್ಪತ್ತಿಯಾಗಲು ನಿತ್ಯದ ಮಿಲನ ಮಹೋತ್ಸವ ಅತ್ಯಂತ ಪ್ರಶಸ್ತಿವಾದ ವೇದಿಕೆ. ಎಲ್ಲಾ ಮರೆತು ಒಂದುಗೂಡಿದ ಆ ಗಳಿಗೆಯಲ್ಲಿ 'ಚಿನ್ನಾ, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ' ಎಂಬ ಹೃದಯದಾಳದ ಮಾತು ತಾನಾಗಿಯೇ ಸ್ಫುರಿಸಿರುತ್ತದೆ. ಇದೇ ಪ್ರೇಮದ ಸಮಾಗಮದಲ್ಲಿರುವ ಅದ್ಭುತ ಶಕ್ತಿ. ಇನ್ನೇಕೆ ತಡ? ನಿಮ್ಮಲ್ಲಿರುವ ಆ ಶಕ್ತಿಯನ್ನು ನೀವೇ ಹುಡುಕಿಕೊಳ್ಳಿ. ನಿಮ್ಮ ಬಾಳು ಬಂಗಾರವಾಗಲಿ.