ಅಯ್ಯೋ, ಚಳಿ ಮಳೆ ಗಾಳಿ ಸುಯ್ಯನೆ ಬೀಸುತ್ತಿರುವ ದಿನಗಳಲ್ಲಿ ಮುದ್ದಿನ ಹೆಂಡತಿಯ ಬೆಚ್ಚನೆಯ ಅಪ್ಪುಗೆಯನ್ನು ಮಿಸ್ ಯಾರಾದರೂ ಮಾಡಿಕೊಳ್ಳುತ್ತಾರಾ? ಅಂತ ನೀವು ಅನ್ನಬಹುದು. ಆದರೆ, ಆಯುರ್ವೇದ ಏನು ಹೇಳುತ್ತದೆಂದರೆ, ಈ ದಿನಗಳಲ್ಲಿ ಮಿಲನ ಮಹೋತ್ಸವ ಆಚರಿಸಿಕೊಂಡರೆ ಹುಟ್ಟುವ ಮಕ್ಕಳಲ್ಲಿ ಅಂಗವೈಕಲ್ಯತೆ ಬರಬಹುದು. ದುಡುಕಿ ಪಶ್ಚಾತ್ತಾಪ ಪಡುವುದಕ್ಕಿಂತ ದೂರವಿರುವುದೇ ಲೇಸಲ್ಲವೆ?
ಇದೇ ಕಾರಣಕ್ಕೆ ಆಷಾಢ ತಿಂಗಳಿನಲ್ಲಿ ಯಾವುದೇ ಮದುವೆ, ಮುಂಜಿ, ಮತ್ತಿತರ ಶುಭ ಸಮಾರಂಭಗಳನ್ನು ಆಯೋಜಿಸುವುದಿಲ್ಲ. ಆಷಾಢದ ಕಾರ್ಮೋಡಗಳು ಕರಗಿ, ಭೀಮನ ಅಮವಾಸ್ಯೆಯ ನಂತರ ಶ್ರಾವಣ ಕಾಲಿಡುತ್ತಿದ್ದಂತೆ ಮನೆಗೆ ಅಕ್ಕರೆಯ ಹೆಂಡತಿ ಮರಳಿ ಸಂಭ್ರಮದ ಮೇರೆ ಮೀರಿರುತ್ತದೆ. ಅತ್ತೆ ಮನೆಯಿಂದ ಮರಳಿಬಂದ ಮಡದಿಯನ್ನು ಕೂಡಲು ಗಂಡ ಗುಡುಗುಡು ಚಟಪಡಿಸುತ್ತಿರುತ್ತಾನೆ. ಮಳೆಹನಿಯಂಥ ಮಡದಿ ಸೂರ್ಯರಶ್ಮಿಯನ್ನು ಸೇರಲು ತವಕಿಸುತ್ತಿರುತ್ತಾಳೆ. ಕಾಮನಬಿಲ್ಲು ಹದೆಯೇರಿರುತ್ತದೆ.
ಧೋಧೋ ಮಳೆಹುಯ್ದು ಅಣೆಕಟ್ಟೆ ತುಂಬಿ, ಕ್ರೆಸ್ಟ್ ಗೇಟ್ ಗಳನ್ನು ಬಿಟ್ಟಕೂಡಲೆ ಭೋರ್ಗರೆಯುವ ಆ ಜಲರಾಶಿಯಂತೆ ಪ್ರೀತಿ ಭೋರ್ಗರೆದಿರುತ್ತದೆ. ಲಾಸ್ಯವಾಡುತ್ತ ಮೈದುಂಬಿ ಹರಿಯುವ ನದಿಯಂತೆ ಪ್ರೀತಿ ನರ್ತನವಾಡಿರುತ್ತದೆ.
;