ಆಷಾಢ ಮಾಸವೆಂದರೆ ಹಾಗೆ, ಅಲ್ಲಿ ಅಗಲಿಕೆಯ ಛಾಯೆ ನವಜೋಡಿಯ ಮನದಲ್ಲಿ ಕಾಡುತ್ತಿರುತ್ತೆ. ಗಂಡ-ಹೆಂಡತಿ, ಅತ್ತೆ-ಸೊಸೆ ಈ ತಿಂಗಳಲ್ಲಿ ಒಟ್ಟಿಗೆ ಇರಬಾರದು ಎಂಬ ನಾನಾ ನಂಬಿಕೆಗಳಿವೆ. ಕೆಲವರು ಪಾಲಿಸುತ್ತಾರೆ, ಹಲವರು ಮೂರೇ ದಿನದಲ್ಲಿ ಒಂದಾಗಿರುತ್ತಾರೆ. ವಿರಹ ವೇದನೆ ನರಕ ಯಾತನೆ. ಇವೆಲ್ಲ ಅವಿವೇಕ, ಗೊಡ್ಡು ಸಂಪ್ರದಾಯ ಅಂತ ಜರಿಯುವವರೂ ಈ ಆಚರಣೆಯ ಹಿಂದಿನ ವೈಜ್ಞಾನಿಕ ಕಾರಣ ತಿಳಿದುಕೊಂಡರೆ ನಮ್ಮ ಹಿರಿಯರ ಕಾಳಜಿ ಖಂಡಿತ ಅರ್ಥವಾಗುತ್ತೆ.
ಪುರಾತನ ಆಯುರ್ವೇದ ಪದ್ಧತಿ ಪ್ರಕಾರ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಗಂಡ ಹೆಂಡಿರ ಲೈಂಗಿಕ ಕ್ರಿಯೆ ನಿಷೇಧ. ಈ ತಿಂಗಳು ಅಶುಭ ತಿಂಗಳೆಂದು ಪರಿಗಣಿಸಿರುವ ಕಾರಣ ಇದು ಗಂಡ ಹೆಂಡತಿ ಕೂಡಲು ಸೂಕ್ತ ಕಾಲವಲ್ಲ. ಅದರಲ್ಲೂ ಹೊಸ ಬದುಕಿಗೆ ನಾಂದಿ ಹಾಡಬೇಕಾದ ನವ ವಧುವರರಿಗೆ ಇದು ಅಶುಭ ಎಂಬ ನಂಬಿಕೆ. ಆದ್ದರಿಂದ ತಿಂಗಳು ಆರಂಭಗೊಳ್ಳುವ ಮುನ್ನವೇ ವಧು ತನ್ನ ತವರು ಮನೆಯ ಕಡೆಗೆ ಮುಖ ಮಾಡುವುದು ವಾಡಿಕೆ.
ಈ ಆಧುನಿಕ ಜೀವನದಲ್ಲಿ ತಲೆತಲಾಂತರದಿಂದ ಬಂದಿರುವ ಈ ಆಚರಣೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಕಷ್ಟಕರವೆಂಬುದು ನಮಗೂ ತಿಳಿದಿದೆ. ಮುದ್ದಿನ ಮಡದಿಯನ್ನು ತಿಂಗಳಿರಲಿ ಮೂರು ದಿನ ಕೂಡ ಆಕೆಯ ತವರು ಮನೆಗೆ ಕಳಿಸಬೇಕೆಂದಾಗ 'ಸೋ ಮಿಸ್ ಯು ಕಣೆ' ಅಂತ ಗಂಡನಿಗೂ ಕಣ್ಣೀರು ಒತ್ತರಿಸಿ ಬಂದಿರುತ್ತದೆ. ಹೆಂಡತಿ ಕೂಡ ತವರು ಮನೆ ಬಿಟ್ಟು ಬರುವಾಗ ಆದಷ್ಟೇ ದುಃಖವಾಗಿರುತ್ತದೆ. ಏನು ಮಾಡೋದು ಪಾಲಿಸಲೇಬೇಕಲ್ಲ? ಆಷಾಢದ ಅಗಲುವಿಕೆಯ ಹಿಂದಿನ ಕಾರಣಗಳನ್ನು ತಿಳಿದುಕೊಂಡರೆ ನೀವೂ ಖಂಡಿತ ಒಪ್ಪುತ್ತೀರಿ. ಲೈಂಗಿಕತೆ ಏಕೆ ನಿಶಿದ್ಧ ಎಂಬುದಕ್ಕೆ ನಾಲ್ಕು ಕಾರಣಗಳನ್ನು ನೀಡಲಾಗಿದೆ. ಒಂದೊಂದಾಗಿ ಓದುತ್ತ ಸಾಗಿರಿ.