ರುಚಿಕಟ್ಟಾಗಿ ಅಡುಗೆ ಮಾಡಿ ಬಡಿಸುವುದರೊಂದಿಗೆ, ಗಂಡನ ನಡೆನುಡಿ, ಆಗುಹೋಗು, ಬೇಕುಬೇಡ ಅರಿತುಕೊಂಡು ಸಾಮರಸ್ಯದ ಸವಿಗಾನ ಹಾಡುವುದು ಹೆಂಡತಿಯ ಆದ್ಯತೆಗಳಲ್ಲಿ ಒಂದಾಗಿರುತ್ತದೆ. ತವರುಮನೆ ಬಿಟ್ಟುಬಂದ ಹೆಂಡತಿಯ ಅಗತ್ಯಗಳನ್ನು ಪೂರೈಸುವುದು ಗಂಡನ ಜವಾಬ್ದಾರಿ, ಕರ್ತವ್ಯವೆಂಬುದನ್ನು ಕೂಡ ಮರೆಯಬಾರದು.
ಹಗಲಲ್ಲಿ ಒಂದು ರೀತಿಯಿದ್ದ ಮನಸ್ಥಿತಿ ಕತ್ತಲಾಗುತ್ತಿದ್ದಂತೆ ಬದಲಾಗುತ್ತ ಸಾಗುತ್ತದೆ. ಸಂಜೆಯ ವೇಳೆಗೆ ಹಿತ್ತಲಿನ ಬಾಗಿಲಿನಿಂದ ತಣ್ಣನೆಯ ಬೀಸುವ ಗಾಳಿ ಮಲ್ಲಿಗೆ ಹೂವು ಮುಡಿದು ಗಂಡನ ಬರುವಿಕೆಗಾಗಿ ಕಾದಿರುವ ನಲ್ಲೆಯ ಮುಂಗುಳಿನೊಂದಿಗೆ ಲಾಸ್ಯವಾಡುತ್ತ ಕಚಗುಳಿ ಇಡಲು ಪ್ರಾರಂಭಿಸುತ್ತದೆ. ವೇಲನ್ನು ಗಾಳಿಗೆ ತೂರಿ ಮೈಮೇಲೆಲ್ಲ ಸುಳಿದಾಡುವ ಗಾಳಿ ಏನೇನೋ ಕಥೆಗಳನ್ನು ಹೇಳಲು ಶುರುವಿಡುತ್ತದೆ.
ಗಂಡ ಬಾಗಿಲು ಬಡಿಯುತ್ತಿದ್ದಂತೆ ಹೊಟ್ಟೆಯಲ್ಲೆಲ್ಲ ಪಾತರಗಿತ್ತಿ ಸುಳಿದಾಡುತ್ತದೆ, ಬ್ಯಾಗು, ಬೂಟನ್ನು ಬಿಸಾಕಿ ಸೊಂಟ ಸುತ್ತಿಬಳಸಿ ಕೆನ್ನೆಗೆ ಮುತ್ತಿಡುವ ಹಂತದಲ್ಲಿ 'ಗಲ್ಲಕೆ ಗಲ್ಲ ಸೋಕಲು ಕೆನ್ನೆ ಕೆಂಪೇಕಾಯಿತು, ಕೆಂದುಟಿ ಜೇನನು ಹೀರುವ ಮುನ್ನ ಭಯವೇಕಾಯಿತು' ಎಂಬ ರೋಮಾಂಚಕಾರಿ ಹಾಡು ಮನದಲ್ಲಿ ಗುನಗಲು ಶುರುಮಾಡುತ್ತದೆ.
ರಾತ್ರಿ ರಂಗೇರುವ ಹೊತ್ತು ಏನನ್ನು ಧರಿಸಿದರೆ ಇನಿಯನ ಕಾಮನೆಯ ಹೆದೆಯೇರಿಸುವುದು ಹೇಗೆ ಎಂಬ ವಿಚಾರ ಎಲ್ಲರಲ್ಲೂ ಸುಳಿದಾಡುತ್ತದೆ. ನೈಟಿ? ಚೂಡಿದಾರ? ಶಾರ್ಟ್ ಸ್ಕರ್ಟ್ ಟಾಪ್? ಅಥವಾ... ನೋನೋ... ಸೀರೆಯೇ ಬೆಸ್ಟು. ಗಂಡನ ಕಾಮನೆ ಕೆರಳಿಸಲು ಅಂದವಾಗಿ ಉಟ್ಟ ಸೀರೆಗಿಂತ ಮತ್ತೊಂದು ದಿರಿಸಿಲ್ಲ ಎಂಬುದು ನೆನಪಿರಲಿ. ದೇಹದ ಉಬ್ಬುತಗ್ಗುಗಳನ್ನು ತೋರಲು ಸೀರೆಗಿಂತ ಶೃಂಗಾರಮಯ ಉಡುಪು ಇನ್ನೊಂದು ಯಾವುದಿದೆ?
ಮೆಲ್ಲಗೆ ಗೆಜ್ಜೆಯ ಸದ್ದು ಮಾಡುತ್ತ, ಕೈಬಳೆ ನಾದವ ತೋರುತ, ವೈಯಾರದಿಂದ ಹೆಜ್ಜೆಯಿಡುತ್ತ ಸೀರೆಯುಟ್ಟು ಬಂದ ನಾರಿಯಲ್ಲಿ ಏನೋ ಚಮತ್ಕಾರವಿರುತ್ತದೆ. ಅರೆ, ಚೂಡಿದಾರ ಧರಿಸಿದಾಗಿನಿಗಿಂತ ಇಂದು ಎಷ್ಟು ಚೆನ್ನಾಗಿ, ಸೌಂದರ್ಯವತಿಯಾಗಿ ಕಾಣುತ್ತಿದ್ದಾಳೆ ಎಂದು ಗಂಡನಿಗೆ ಅನ್ನಿಸದಿದ್ದರೆ ಕೇಳಿ. ಮಂಚವೇರುವ ಹೊತ್ತು ಎದೆಯ ಮೇಲಿನ ಸೀರೆ ಜಾರಬಂಡಿಯಾಡುವ ಘಳಿಗೆ ಸುಮಧುರವಾಗಿರಲಿ, ಮಿಲನ ಮಹೋತ್ಸವ ಆನಂದದಾಯಕವಾಗಿರಲಿ.