ನಿಮಿರು ವೈಫಲ್ಯ ಅನುಭವಿಸುವವರಿಗೆ ವಯಾಗ್ರ ಮಾತ್ರೆ ಪುರುಷತ್ವ ಪುಟಿದೇಳುವಂತೆ ಮಾಡಿದೆ, ನವಯೌವನ ಸ್ಫುರಿಸುವಂತೆ ಮಾಡಿದೆ. ಗಂಡನ ಅಸಹಾಯಕತೆ ಅಥವಾ ವೈಫಲ್ಯದಿಂದ ನಿರಾಶಳಾಗಿದ್ದ ಹೆಂಡತಿಗೆ ಹೊಸ ಹುರುಪು ಮತ್ತು ಹೊಸ ಆಶಾವಾದವನ್ನು ತುಂಬಿದೆ. ವಯಾಗ್ರ ಎಂಬುದು ದಟ್ಟ ಕಾರ್ಮೋಡದಲ್ಲಿ ತೂರಿಬಂದ ಸೂರ್ಯನ ಕಿರಣದಂತಾಗಿದೆ.
ವೈದ್ಯರ ಅಣತಿಯಂತೆ ವಯಾಗ್ರ ಮಾತ್ರೆಯನ್ನು ನಿಯಮಿತವಾಗಿ ತೆಗೆದುಕೊಂಡರೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ನಡೆಸಿದರೆ ವಯಾಗ್ರದಿಂದ ಯಾವ ಸೈಡ್ ಎಫೆಕ್ಟ್ ಇರುವುದಿಲ್ಲ ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಿಲ್ಲ ಎಂದು ವೈದ್ಯರೇ ಹೇಳಿದ್ದಾರೆ. ಪುರುಷರಿಗೆ, ಅದರಲ್ಲೂ ವಯಸ್ಕರಿಗೆ ವಯಾಗ್ರ ಮಾತ್ರೆ ವರದಾನವಾಗಿ ಬಂದಿದೆ. ಆದರೆ, ಮಹಿಳೆಯರಿಗೆ?
ಒಂದು ಅಧ್ಯಯನದ ಪ್ರಕಾರ, ಪುರುಷರು ವಯಾಗ್ರ ಬಳಸುತ್ತಿರುವುದರಿಂದ ಮಹಿಳೆಯರಲ್ಲಿ ನಾನಾ ರೂಪದ ತೊಂದರೆಗಳು ಕಾಣಿಸಿಕೊಳ್ಳುವಂತೆ ಮಾಡಿದೆ. ಗಂಡನ ಅತಿಯಾದ ಕಾಮೋತ್ಸಾಹ ಹೆಂಡತಿಗೆ ಕಂಟಕವಾಗಿ ಪರಿಣಮಿಸುತ್ತಿದೆ. ಈ ಮಾಂತ್ರಿಕ ಮಾತ್ರೆಯನ್ನು ಕಂಡುಹಿಡಿಯುವಾಗ ವಿಜ್ಞಾನಿಗಳು ಒಂದು ದಿಕ್ಕಿನಲ್ಲಿ ಮಾತ್ರ ಯೋಚಿಸಿದರು, ಮಹಿಳೆಯ ದೃಷ್ಟಿಯಿಂದ ಯೋಚಿಸಲೇ ಇಲ್ಲ ಎಂಬ ವಾದವೂ ಇದೆ.
ಅದು ಹೇಗೆಂದರೆ, ವಯಾಗ್ರ ಮಾತ್ರೆಯನ್ನು ನಿಯಮಿತವಾಗಿ ತೆಗೆದುಕೊಂಡ ಪುರುಷ ಮತ್ತೆ ಹಳೆಯ ಪೌರುಷವನ್ನು ಪಡೆಯುತ್ತಾನೆ, ಗಂಡಸಿಗಿರಬೇಕಾದ ಜನನಾಂಗದ ಗಡಸುತನ ಮತ್ತೆ ಪ್ರಾಪ್ತಿಯಾಗುತ್ತದೆ. ಆದರೆ, ಆ ರಭಸಕ್ಕೆ ಹೆಂಡತಿ ಹೊಂದಿಕೊಳ್ಳದಿದ್ದರೆ ಅಥವಾ ಋತುಚಕ್ರ ನಿಂತುಹೋಗಿದ್ದರೆ ಅಥವಾ ಸರಸದಲ್ಲಿ ಆಕೆ ಆಸಕ್ತಿಯನ್ನೇ ಕಳೆದುಕೊಂಡಿದ್ದರೆ? ಗಂಡಸಿನ ಕಾಮೋತ್ಸಾಹದಿಂದ ಹೆಂಡತಿಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯೇ ಹೆಚ್ಚು.
ಮಹಿಳೆಯ ಋತುಚಕ್ರ ನಿಂತುಹೋಗಿದ್ದರೆ ಸಹಜವಾಗಿ ಲೈಂಗಿಕ ಆಸಕ್ತಿ ನಿಂತಿರುತ್ತದೆ, ಜನನಾಂಗ ನಿರೀಕ್ಷಿಸಿದಂತೆ ಹಿಗ್ಗುವುದಿಲ್ಲ, ಸುಖಕರವಾಗ ಲೈಂಗಿಕ ಕ್ರಿಯೆಗೆ ಅಗತ್ಯವಾದ ದ್ರವ ಸ್ರವಿಸುವುದಿಲ್ಲ. ಅಂತಹ ಸಂದರ್ಭದಲ್ಲಿ ವಯಾಗ್ರ ನುಂಗಿದ ಪುರುಷ ವ್ಯಗ್ರ ಹುಲಿಯಂತೆ ಹೆಂಡತಿಯ ಮೇಲೆ ಎಗರಿದರೆ ಹೆಂಡತಿ ಕುರಿಯಂತಾಗುತ್ತಾಳೆ. ಆಕೆಯ ಜನನಾಂಗಕ್ಕೆ ಸಂಭೋಗದಿಂದ ತೀವ್ರವಾದ ಹಾನಿಯಾಗುವ ಸಂಭವನೀಯತೆ ಇರುತ್ತದೆ. ಮತ್ತು ಮಹಿಳೆಯ ಕಾಮಾಂಕಾಂಕ್ಷೆಯನ್ನೇ ಸರ್ವನಾಶ ಮಾಡಿಹಾಕಿಬಿಡುತ್ತದೆ.
ಸಂಭೋಗಿಸುವಾಗ ಮಹಿಳೆ ಒಂದರಿಂದ ಮತ್ತೊಂದು ಸಂಭೋಗದ ನಡುವೆ ಕನಿಷ್ಠ ಎರಡು ತಾಸುಗಳ ಅಂತರ ಇರಬೇಕೆಂದು ಆಶಿಸುತ್ತಾಳೆ. ಆಗ ಮಾತ್ರ ಮತ್ತೊಂದು ಮಿಲನ ಮಹೋತ್ಸವಕ್ಕೆ ಅಣಿಯಾಗಲು ಸಾಧ್ಯ ಮತ್ತು ಸಂತೋಷಿಸಲು ಕೂಡ ಸಾಧ್ಯ. ಆದರೆ, ವಯಾಗ್ರ ತಿಂದ ಪುರುಷ ಎರಡು ಗಂಟೆಯಲ್ಲ ಎರಡು ನಿಮಿಷದಲ್ಲಿ ಮತ್ತೊಂದು ಕಾಮಕೇಳಿಗೆ ತಯಾರಾಗಿರುತ್ತಾನೆ. ಇದು ಸಂಗಾತಿಗೆ ರುಚಿಸದೇ ಹೋಗಬಹುದು ಮತ್ತು ಆಕೆಯನ್ನು ಘಾಸಿಮಾಡಲೂಬಹುದು.
ಇದಕ್ಕಿರುವ ಪರಿಹಾರವೆಂದರೆ, ಯಾವ ಸಂದರ್ಭದಲ್ಲಿ, ಎಷ್ಟು ಸಮಯದ ಅಂತರದಲ್ಲಿ, ಎಷ್ಟು ಹೊತ್ತು ಸಂಭೋಗಿಸಬೇಕು ಎಂದು ಗಂಡ ಹೆಂಡತಿ ಇಬ್ಬರೂ ಕುಳಿತು ಚರ್ಚಿಸಿ, ಪರಸ್ಪರ ಒಪ್ಪಿಗೆಯಾದ ನಂತರ ರತಿಕ್ರೀಡೆಯಲ್ಲಿ ತೊಡಗಬಹುದು. ವಯಾಗ್ರ ಸ್ವೀಕರಿಸಿದ ಪುರುಷ ತನ್ನ ಹೆಂಡತಿಗೆ ನೋವಾಗದಂತೆ ನಾಜೂಕಾಗಿ ವ್ಯವಹರಿಸಿದರೆ ಸುಖಾನಂದದ ವೈಭೋಗ ಇಮ್ಮಡಿಗೊಳ್ಳುತ್ತದೆ. ವಯಾಗ್ರದಿಂದ ಮಹಿಳೆಯರ ಲೈಂಗಿಕ ಜೀವನ ಛಿದ್ರವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪುರುಷರದ್ದು.