•  

ಪ್ರೀತಿ ಪ್ರೇಮ, ಕಾಮ ಬಂದಾಗ ಚರ್ಚೆಗೆ ಫುಲ್‌ಸ್ಟಾಪ್!

Array
Why the discussion should end here?
 
ನಮ್ಮದೊಂದು ಏಳೆಂಟು ಜನರ ಗೆಳೆಯರ ಗುಂಪೇ ಇದೆ. ಗೆಳತಿಯರಿಗೆ ಖಂಡಿತ ಪ್ರವೇಶವಿಲ್ಲ. ಗೆಳತಿಯರಿಗೆ ಪ್ರವೇಶವಿಲ್ಲ ಏಕೆಂದರೆ ನಮಗ್ಯಾರಿಗೂ ಗರ್ಲ್‌ಫ್ರೆಂಡ್‌ಗಳಿಲ್ಲ. ಗರ್ಲ್‌ಫ್ರೆಂಡ್ಸ್ ಯಾಕಿಲ್ಲ ಅಂದ್ರೆ ಹುಡುಗಿಯರನ್ನು ನೇರವಾಗಿ ಹೋಗಿ ಮಾತನಾಡಿಸುವ ತಾಕತ್ತು ಇಲ್ಲಿ ಅನೇಕರಿಗಿಲ್ಲ ಮತ್ತು ಕೆಲವರಿಗೆ ಈಗಾಗಲೆ ಮದುವೆಯಾಗಿದೆ! ನಾವು ಬೆಳೆದು ಬಂದ ಪರಿಸರವೇ ಅಂತಹುದೋ ಅಥವಾ ಧೈರ್ಯ ಮಾಡೇ ಇಲ್ವೋ ಅಂತೂ ನಮ್ಮ ಗುಂಪಿನಲ್ಲಿ ಹುಡುಗಿಯರಿಗೆ ನೋ ಎಂಟ್ರಿ.

ನಮ್ಮ ಇನ್ಹಿಬಿಷನ್ ಎಂತಹುದೇ ಇರಲಿ, ನಾವು ಒಟ್ಟಿಗೆ ಸೇರಿದಾಗ ಚರ್ಚೆ ಆಗದ ವಿಷಯಗಳೇ ಇಲ್ಲ. ಕ್ರಿಕೆಟ್ಟು, ರಾಜಕೀಯ, ಟ್ರೆಕ್ಕಿಂಗು, 'ಸಾಡು' ಥರ ಇರೋ ಕಂಟೆಂಟ್ ಮ್ಯಾನೆಜರು, ಇನ್ಯಾರದೋ ಲವ್ ಅಫೇರು ಎಟ್ಸಿಟ್ರಾ ಎಟ್ಸಿಟ್ರಾ. ಅಂಥಾ ಅಪಾಪೋಲಿಗಳಲ್ಲದಿದ್ದರೂ ಆಗಾಗ ಪೋಲಿ ಜೋಕುಗಳು ನುಸುಳಿಯೂ ಬರುತ್ತವೆ. ಒಂದು ಬಾರಿ ಹೀಗೆ ತಮಾಷೆಗಳನ್ನು ಮಾಡಿಕೊಂಡು ಹರಟೆ ಹೊಡೆಯುತ್ತಾ ಊಟ ಮಾಡುತ್ತಾ ಕೂತಿದ್ದಾಗ ನಡೆದಂಥ ಸಂಭಾಷಣೆಯ ತುಣುಕುಗಳು ಇಲ್ಲಿವೆ. ಓದಿಕೊಳ್ಳಿ..

"ಮಗಾ, ಸಚಿನ್ ವೇಸ್ಟು ಕಣೋ. ಸುಮ್ನೆ ರಿಟೈರಾಗೋದು ಓಳ್ಳೇದು. ಮೊದಲಿನ ವಿಶ್ವಾಸವೇ ಉಳಿದಿಲ್ಲ. ಆಕ್ರಮಣಕಾರಿ ಶೈಲಿ ಎಂದೋ ಮಾಯವಾಗಿದೆ. ಕಿತ್ತು ಬಿಸಾಡುವ ಮೊದಲು, ಪ್ಯಾಡು ಕಳಚಿಡೋದೇ ಬೆಸ್ಟು. ಇನ್ನು ಉಳಿದಿರೋ ಸೌರವ್, ದ್ರಾವಿಡ್, ಲಕ್ಷ್ಮಣ್, ಕುಂಬ್ಳೆ ಅವರೂ ಅಷ್ಟೇ ಕಣೋ. ಮೈಯಲ್ಲಿ ಕಸುವು ಉಳಿದಿಲ್ಲ. ಒಂದೇ ಒಂದು ಸಿಕ್ಸರ್ ಎತ್ತೋ ತಾಕತ್ತು ಎಂದೋ ಸತ್ತು ಹೋಗಿದೆ. ಎಲ್ಲಾ ರಾಜಕೀಯ ಕಣೋ. ಆ ನನ್ಮಗಾ ಪವಾರ್ ಪವರ್ ಇರೋದ್ರಿಂದ್ಲೇ ಇವ್ರೆಲ್ಲಾ ಉಳಿದಿರೋದು."

"ಹೊಗಲೋ. ರಾಜಕೀಯ ಎಲ್ಲಿಲ್ಲ ಹೇಳು? ಈಗ ನೋಡಿದ್ಯಾ ಮೋನಿಕಾ ಅನ್ನೋ ವೇಟ್ ಲಿಫ್ಟರ್ ಉದ್ದೀಪನ ಮದ್ದು ಸೇವಿಸಿರುವ ಆರೋಪ ಹೊತ್ತು ಸಿಕ್ಕಿ ಬಿದ್ದಿಲ್ವಾ? ರಾಜಕೀಯ ಇದ್ದಿದ್ರಿಂದ್ಲೇ ಅವಳು ಆಯ್ಕೆಯಾಗಿದ್ದು ಅನ್ನೋ ಮಾತು ಕೇಳಿ ಬರ್ತಾ ಇದೆ. ಏನೇ ಹೇಳು ಸಚಿನ್, ದ್ರಾವಿಡ್, ಕುಂಬ್ಳೆ, ಸೌರವ್ ಭಾರತ ಕ್ರಿಕೆಟ್ ತಂಡದ ಪಿಲ್ಲರ್ಸ್ ಇದ್ದಹಾಗೆ, ತಿಳ್ಕೋ. ಹುಡುಗಿಯರ ಹಿಂದೆ ತಿರುಗುತ್ತಾ ಡಿಸ್ಕೋಥೆಕ್‌ಗಳಲ್ಲಿ ಕುಣಿಯೋ ಆ ಯುವಿಗಿಂತ ಇವ್ರೇ ಎಷ್ಟೋ ಪಾಲು ಉತ್ತಮ."

"ಹುಡುಗಿ ಹಿಂದೆ ಬಿದ್ದಿದ್ದಾ ಅಂದ್ಕೂಡ್ಲೆ ನೆನಪಾಯ್ತು ನೋಡು. ನಮ್ಮ ಕಲೀಗೊಬ್ಬ ಒಂದು ಹುಡುಗಿ ಹಿಂದೆ ಬಿದ್ದಿದ್ದ. ಅವಳು ಪರಿಚಯವಾಗಿದ್ದು ಚಾಟ್ ಮುಖಾಂತರ. ಯಾರೋ ಚಿನ್ನಾ ಚಿಪಳೂಣ್ಕರ್ ಅಂತೆ. ಇವನು ಚೆನ್ನಬಸವ. ಆಕೆಯ ಮೂಲ ಮಹಾರಾಷ್ಟ್ರ, ಬೆಳೆದಿದ್ದು ಚಿಕ್ಕಮಗಳೂರು ಮತ್ತು ಕೆಲಸಕ್ಕಿದ್ದಿದ್ದು ಬೆಂಗಳೂರಿನಲ್ಲಿ, ಅಂತೆ. ಇಬ್ರೂ ಮೇಲ್‌ಗಳನ್ನು ಮಾಡಿದ್ದೇ ಮಾಡಿದ್ದು. ಡೀಪ್ ಲವ್ವು ಕಣೋ. ಇಬ್ರೂ ಫೋಟೋ ಎಕ್ಸ್‌ಚೇಂಜ್ ಮಾಡಿಕೊಂಡಿದ್ರು. ಅವಳ ಮೇಲ್ ಬಂದ ಕೂಡ್ಲೆ ಈ ಯಪ್ಪ ಸಿಕ್ಕಾಪಟ್ಟೆ ಎಕ್ಸೈಟಾಗಿ ಬಿಡ್ತಿದ್ದಾ. ಒಂದು ಬಾರಿ ಪ್ರೇಮಿಗಳ ದಿನ ಕೂಡ ಬಂದೇ ಬಿಡ್ತು. ಬಸವ ಹೊಸ ಟೀಶರ್ಟ್ ಕೊಂಡ್ಕೊಂಡ ಕೆಂಪು ಬಣ್ಣದ್ದು, ಚಾಕಲೇಟ್ ತಂದ ಕ್ಯಾಡ್ಬರೀಸು, ಬೊಂಬೆ ಕೊಂಡ ಆರ್ಚೀಸ್‌ನಿಂದ. ಆಕೆ ಫೋರಂ ಬಳಿ ಇರುವ ರಾಜಕುಮಾರ್ ಪ್ರತಿಮೆ ಬಳಿ ಬಿಳಿ ಸೆಲ್ವಾರ್ ಹಾಕ್ಕೊಂಡು ಸರಿಯಾಗಿ ಐದು ಗಂಟೆಗೆ ಕಾಯ್ತಿರ್ತೀನಿ ಅಂತ ಹೇಳಿದ್ಲು. ಇವನೂ ರೆಡಿಯಾಗಿದ್ದ. ಆದ್ರೆ ಹೋಗದಂತೆ ನಾವೇ ತಡೆದೆವು.

ಯಾಕಂದ್ರೆ ಆ ಹುಡುಗಿ ಮತ್ತಾರೂ ಅಲ್ಲ ನನ್ನ ಮತ್ತೊಬ್ಬ ಕಲೀಗ್, ಬಸವನ ಪಕ್ಕದಲ್ಲೇ ಕೂಡ್ತಿದ್ದ. ಫೇಕ್ ಐಡಿ ಕ್ರಿಯೇಟ್ ಮಾಡಿ ಸರೀ ಗೋಳು ಹೊಯ್ಕೊಂಡು ಬಿಟ್ಟಿದ್ವಿ. ನಮ್ಮ ಟೀಮ್‌ನಲ್ಲಿ ಎಲ್ಲರಿಗೂ ಈ ಸಂಗತಿ ಗೊತ್ತಿತ್ತು. ಗೊತ್ತಿರದಿದ್ದುದು ಆ ಗೂಬೆ ಬಸವನಿಗೆ ಮಾತ್ರ. ಅಂಥಾ ಬುದ್ದೂನ ನಾನು ಜನ್ಮದಲ್ಲೇ ನೋಡಿಲ್ಲ. ಈಗ್ಲೂ ಅವಳ ಮೇಲೆ ಮನಸ್ಸಿಟ್ಟಿದ್ದಾನೆ, ಮದುವೆನೂ ಆಗ್ತಾನಂತೆ."

"ಅಲ್ಲಾ ಕಣೋ. ಎಲ್ಲಾ ಗೊತ್ತಾಗಿ ಬೇಜಾರಾಗಿ ಸೂಸೈಡ್ ಮಾಡ್ಕೊಂಡ್ರೆ?"

"ಸೂಸೈಡ್ ಮನೆ ಹಾಳಾಗೋಗ್ಲಿ. ಕೂಸು ಹುಟ್ಟೋಕೆ ಮುಂಚೆನೇ ಕುಲಾವಿ ಅಂತಾರಲ್ಲ ಹಾಗೆ ಚಿನ್ನಾ ಜೊತೆ ಮದುವೆ, ಫಸ್ಟ್ ನೈಟು, ಹನಿಮೂನು ಅಂತೆಲ್ಲಾ ಮಾತಾಡ್ತಿರ್ತಾನೆ ನನ್ಮಗ. ಏನ್ ತಮಾಷೆ ಗೊತ್ತಾ?"

"ಅವಂದು ಫಸ್ಟ್ ನೈಟು ಒತ್ತಟ್ಟಿಗಿರಲಿ ನನ್ನ ಫಸ್ಟ್ ನೈಟ್ ಕಥೆ ಹೇಳ್ತೀನಿ ಕೇಳು. ಮಗಾ, ಮದುವೆ, ರಿಸೆಪ್ಶನ್ನು ಆಗಿ ಮನೆ ತಲುಪುವ ಹೊತ್ತಿಗೆ ಹನ್ನೊಂದೂ ಮುಕ್ಕಾಲು. ನಾನು ಆಗ್ಲೇ ಗೌರಿಶಿಖರದ ತುದಿಗಿದ್ದೆ, ಅಂಥಾ ಎಕ್ಸೈಟ್ಮೆಂಟು. ನನ್ನ ಹೆಂಡ್ತಿ ಬಲಗಾಲಿಟ್ಟು ಮನೆ ಎಂಟ್ರಿ ಮಾಡಿದ್ದೂ ಆಯ್ತು. ಫಸ್ಟ್ ನೈಟಿಗೆ ರೂಮು ಸಖತ್ತಾಗಿ ಸಿಂಗಾರ ಮಾಡಿದ್ರು. ಆದ್ರೆ ಈ ಹೆಂಗಳೆಯರು ಬಿಡಬೇಕಲ್ಲಾ? ಎಲ್ಲಾರೂ ಸೇರ್ಕೊಂಡು ಗುಸುಗುಸು ಅಂತ ಏನೇನೋ ಮಾತಾಡ್ತಿದ್ರು. ಮಧ್ಯಮಧ್ಯ ಕಿಸಿಕಿಸಿ ನಗೆ. ಹನ್ನೆರಡಕ್ಕೇ ಮುಹೂರ್ತ ಅಂತ ಬೇರೆ ಹೇಳಿದ್ರು. ಇಲ್ಲಿ ನೋಡಿದ್ರೆ ಇವರದು ಮುಗೀತಾನೇ ಇಲ್ಲ. ಆರತಿ ಮಾಡಿದ ಮೇಲೆ ಕಾಸು ಕಿತ್ಕೊಂಡ್ರು. ತೆಂಗಿನಕಾಯಿ ಅರಿಶಿಣ ಕುಂಕುಮ ಹೆಂಗಳೆಯರಿಗೆಲ್ಲಾ ಕೊಟ್ಟದ್ದೂ ಆಯಿತು. ಈ ಸಂದರ್ಭದಲ್ಲಿ ಅರಿಶಿಣ ಕುಂಕುಮ ಯಾಕೋ ಕಾಣೆ! ಅಂತೂ ಅವರದೆಲ್ಲಾ ಮುಗಿದು ಬಾಗಿಲು ಹಾಕೊ ಹೊತ್ಗೆ ಹನ್ನೆರಡರ ಹತ್ತಿರ ಬಂದು ಬಿಟ್ಟಿತ್ತು. ಅದೆಲ್ಲ ಇರ್ಲಿ. ರೂಮು ಸಿಂಗಾರ ಮಾಡಿದ್ದಾರೆ... ಎಲ್ಲಿ ನೋಡಿದರಲ್ಲಿ ಸೇವಂತಿಗೆ ಹೂವು, ಉಸಿರಾಡಿಸೋದಕ್ಕೂ ಕಷ್ಟ ಆಗ್ತಿತ್ತು. ಹಣ್ಣು ಹಂಪಲು, ಕರ್ಚಿಕಾಯಿ, ಹಾಲು ಎಲ್ಲಾ ಇಟ್ರಿದ್ರು. ಹಿಂದೆ ದೇವರ ಫೋಟೋ. ಇಡೀ ರಾತ್ರಿ ದೀಪ ಉರೀತಾನೇ ಇರ್ಬೇಕು ಅಂತ ತಾಕೀತು ಬೇರೆ, ಫ್ಯಾನು ಹಾಕುವಂತಿಲ್ಲ. ನನಗೋ ಬೆವರು ಕಿತ್ಕೊಂಡು ಬಂದಿತ್ತು. ಏನ್ಕೇಳ್ತೀಯಾ ನನ್ನ ಕಥೆ! ನನ್ ಕಥೆಯೇನೋ ಹೇಳಿದೆ. ಗುರೂ ನಿಂದೂ ರಿಸೆಂಟ್ಲಿ ಮದುವೆ ಆಯ್ತಲ್ಲಾ ನಿಂದ್ಯಾಗಿತ್ತಪ್ಪಾ ಫಸ್ಟ್ ನೈಟ್ ಪ್ರಿಪರೇಷನ್ನೂ?"

"ಟೈಮಾಯ್ತೇಳ್ರಪ್ಪಾ. ಕೆಲಸಕ್ಕೆ ಶುರು ಹಚ್ಕೋಬೇಕು." ಅಂತ ಎದ್ದೇ ಬಿಡೋದಾ ನನ್ಮಗ! ಫಸ್ಟ್ ನೈಟ್ ಅಲ್ಲ ಕಣೋ, ಫಸ್ಟ್ ನೈಟ್ ಪ್ರಿಪರೇಷನ್ನು ಅಂದ್ರೂ ಕೇಳದೆ ಎದ್ದೇಬಿಟ್ಟ. ಅವನ ಜೊತೆ ಉಳಿದವರೂ.

ಚರ್ಚೆ ಇಲ್ಲಿಗೆ ಮುಕ್ತಾಯವಾಗುತ್ತದೆ!

English summary
When it comes to love, intimacy the discussion never progresses in indian society. Why?
Story first published: Wednesday, August 6, 2008, 14:38 [IST]

Get Notifications from Kannada Indiansutras