•  

ಮೊದಲ ರಾತ್ರಿಗೆ ಶಯನಗೃಹದ ಶೃಂಗಾರ

Array
First night decorations
 
ಬಾಳ ಸಂಗಾತಿ, ಮದುವೆ, ಮೊದಲ ರಾತ್ರಿ, ನಂತರದ ಸುಮಧುರ ಜೀವನದ ಬಗ್ಗೆ 'ಹೀಗಿದ್ದರೆ ಚೆನ್ನ' ಎಂಬ ಕಲ್ಪನೆ, ಕನಸು ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಹುಡುಗ ಆಗಲಿ, ಹುಡುಗಿ ಆಗಲಿ ಮದುವೆ ಫಿಕ್ಸ್ ಆಗಿ ಮಧುಮಂಚ ಏರುವವರೆಗೂ ಹಗಲು ರಾತ್ರಿ ಅದರದೇ ಧ್ಯಾನ. ನಾಲ್ಕಾರು ಒಳ್ಳೆ ಬಟ್ಟೆ ಹೊಲಿಸಿಕೊಳ್ಳಬೇಕು, ನೆಂಟರಿಷ್ಟರು ಮನೆಗೆ ಬಂದಾಗ ಅವರನ್ನೆಲ್ಲ ಹೇಗೆ ವಿಚಾರಿಸಿಕೊಳ್ಳಬೇಕು, ಮದುವೆ ಸಡಗರ ಹೇಗಿರಬೇಕು, ಮೊದಲ ರಾತ್ರಿಯಂತೂ ಹೀಗೆ ಇರಬೇಕು, ನೆನೆಸಿಕೊಂಡ್ರೆ ಒಂಥರ ರೋಮಾಂಚನ... ಎಲ್ಲಕ್ಕಿಂತ ಹೆಚ್ಚಾಗಿ ಆರೋಗ್ಯ ದಿವಿನಾಗಿರಬೇಕು, ಏನೇನೋ ತಿಂದು ಫಸ್ಟ್ ನೈಟ್ ಆರೋಗ್ಯ ಹಾಳು ಮಾಡಿಕೊಳ್ಳಬಾರದು... ಹೀಗೆ ನೂರಾಯೆಂಟು ವಿಚಾರಗಳೇ ತಲೆಯಲ್ಲಿ ಗಿರಕಿ ಹೊಡೆಯುತ್ತಿರುತ್ತವೆ.

ಆದರೆ, ಅನೇಕರಿಗೆ ಗಮನದಲ್ಲಿರದಿರುವುದು ಮೊದಲ ರಾತ್ರಿಯಂತು ಸುಮಧುರ ದಾಂಪತ್ಯಕ್ಕೆ ನಾಂದಿ ಹಾಡಲಿರುವ ಶಯನಗೃಹದ ಶೃಂಗಾರದ ಕುರಿತು. ಅಯ್ಯೋ, ಬೆಡ್ ರೂಮು ಹೇಗಿದ್ದರೇನು? ಅದಕ್ಕೆಲ್ಲಾ ಯಾಕೆ ತಲೆ ಕೆಡಿಸಿಕೊಳ್ಳಬೇಕು? ಲೈಟ್ 'ಉಫ್' ಅಂದಮೇಲೆ ಅದೆಲ್ಲಾ ಎಲ್ಲಿ ಕಾಣುತ್ತೆ ಅಂತ ಮೂಗು ಮುರಿಯಬೇಡಿ. ಮೂಗು ಮುರಿಯುವವರು, ತಾವು ಆಯ್ಕೆ ಮಾಡಿಕೊಂಡಿರುವ ಹುಡುಗಿಯ ಬಗ್ಗೆಯೂ ಅದೇ ಮಾತು ಹೇಳ್ತಾರಾ? ಹುಡುಗಿ ಹೇಗಿದ್ದರೇನು... ಲೈಟ್ 'ಉಫ್' ಅಂದಮೇಲೆ... ಇಂಪಾಸಿಬಲ್!

ಆಫ್ ಕೋರ್ಸ್, ನೆಂಟರಿಷ್ಟರೆಲ್ಲಾ ಸೇರಿಕೊಂಡು ಮೊದಲರಾತ್ರಿಯ ಸಲ್ಲಾಪದ ಕೋಣೆಯನ್ನ 'ತಮಗಿಷ್ಟ'ದಂತೆ ಅಲಂಕಾರ ಮಾಡಿಯೇ ಮಾಡಿರುತ್ತಾರೆ. ಆದರೆ, ಆ ಅಲಂಕಾರ ನವದಂಪತಿಗಳಿಗೆ ಮೊದಲನೋಟಕ್ಕೇ ಇಷ್ಟವಾಗಿ ಸುಖಮಯ ದಾಂಪತ್ಯಕ್ಕೆ ಪಲ್ಲವಿ ಹಾಡಬೇಡವೆ?

ಶಯನಗೃಹದ ಶೃಂಗಾರದ ಬಗ್ಗೆಯೂ ನಿಮಗೆ ಒಂದು ಅಂದಾಜು ಇರಲಿ. ಒಳಹೊಕ್ಕ ತಕ್ಷಣ ಶಯನ ಕೋಣೆ ಮನಕ್ಕೆ ಮುದ ನೀಡುವಂತಿರಬೇಕು, ಒಂದು ರೀತಿಯ ಆಹ್ಲಾದ ಸೃಷ್ಟಿಸುವಂತಿರಬೇಕು. ಅಲಂಕಾರವೆಂದಕೂಡಲೆ ಸಿನೆಮಾಗಳಲ್ಲಿ ಮಾಡಿದಂತೆ ವೈಭವೋಪೇತ ಅಲಂಕಾರವಂತೂ ಅಲ್ಲವೇ ಅಲ್ಲ. ಸರಳತೆಯೇ ಸೌಂದರ್ಯಕ್ಕೆ ಸೋಪಾನವೆಂಬುದು ನೆನಪಿರಲಿ. ಈ ಅಲಂಕಾರ ನೇರವಾಗಿಯಲ್ಲದಿದ್ದರೂ ಪರೋಕ್ಷವಾಗಿಯಾದರೂ ಆ ಕ್ಷಣದಲ್ಲಾಗಲಿ, ಮುಂದಿನ ದಾಂಪತ್ಯ ಜೀವನದಲ್ಲಾಗಲಿ ಪ್ರಭಾವ ಬೀರುವುದರಲ್ಲಿ ಎರಡು ಮಾತಿಲ್ಲ.

ಹಾಗಾದರೆ ಹೀಗಿದ್ದರೆ ಹೇಗೆ?

1) ಸರಳತೆಯಲ್ಲಿಯೇ ಸೌಂದರ್ಯವಿದೆ. ಮದುಮಗಳು ಹೇಗೆ ಅಲಂಕಾರ ಲಿಮಿಟ್ಟು ಮೀರಿದರೆ ಹೇಗೆ ಅಸಹ್ಯವಾಗಿ ಕಾಣುತ್ತಾಳೋ ಕೋಣೆಯ ಅಲಂಕಾರವೂ ಮಿತಿಮೀರದಿರಲಿ.

2) ಸಿನೆಮಾದಲ್ಲಿ ತೋರಿಸಿದಂತೆ ಮಂಚದ ತುಂಬ ಮಲ್ಲಿಗೆ, ಸೇವಂತಿಗೆ, ಕನಕಾಂಬರ ಹೂಗಳ ದಂಡಿದಂಡಿ ಸುರಿಮಳೆ ಸಲ್ಲ. ಅಲರ್ಜಿ ಇದ್ದವರು ಹೆಂಡತಿಯೊಡನೆ ಸಲ್ಲಾಪ ಬಿಟ್ಟು ಸೀನುತ್ತಾ ಕೂರಬೇಕಾದೀತು. ಅಥವಾ ಹೂಗಳಲ್ಲಿನ ಹುಳಗಳೆಲ್ಲಾ ಮೈಮೇಲೆ ಹರಿದಾಡುತ್ತಾ ರಸಾಭಾಸವಾದೀತು. ಪ್ರೇಮದ ಸಂಕೇತವಾದ ಕೆಂಪು ಗುಲಾಬಿ ಕಣ್ಣಿಗೆ ಕಾಣುವಂತೆ ನಾಲ್ಕಾರಿದ್ದರೆ ಅಷ್ಟೇ ಸಾಕು.

3) ಹಾಸಿಗೆಯ ಮೇಲೆ ಮನದ ಆಹ್ಲಾದತೆಯನ್ನು ಹೆಚ್ಚಿಸುವ ಬೆಡ್ ಶೀಟು, ದಿಂಬಿನ ಕವರು, ತಿಳಿಬಣ್ಣದ ಹೊದಿಕೆಗಳಿರಲಿ. ಮುಖಕ್ಕೆ ರಾಚುವ ಬಣ್ಣದ, ನೋಡುತ್ತಿದ್ದಂತೆ ಮುಖ ಕಿವುಚುವ ಡಿಸೈನಿನ ಬೆಡ್ ಶೀಟಿದ್ದರೆ ಮೂಡೂ ಕೂಡ ಹಾಳಾದೀತು. ಅವು ಸೂಸುವ ವಾಸನೆಯ ಬಗ್ಗೆಯೂ ಎಚ್ಚರವಿರಲಿ.

4) ಶಯನ ಕೋಣೆ ಸುವಾಸನಾಭರಿತವಾಗಿರಲೆಂದು ಅಪ್ಪಿತಪ್ಪಿ ಕೂಡ ರೂಮ್ ಫ್ರೆಷನರ್ ಸಿಂಪಡಿಸಬೇಡಿ. ತಾಜಾ ಹೂಗಳಿಂದ, ಊದುಬತ್ತಿಯ ಸುವಾಸನೆಯಿಂದ ಕೋಣೆಯಾಗಲೇ ಉಸಿರುಗಟ್ಟುವಂತಾಗಿರುತ್ತದೆ. ಅಲ್ಲದೆ, ರೂಮ್ ಫ್ರೆಷನರ್ ಸಿಂಪಡಿಸುವುದು ಅನೇಕ ಕಾಯಿಲೆಗಳಿಗೆ ಕೂಡ ದಾರಿ ಮಾಡಿಕೊಡುತ್ತದೆ.

5) ಮೊದಲ ರಾತ್ರಿಯ ಮೊದಲು ಕೋಣೆಗೆ ಬಣ್ಣ ಹಚ್ಚಿದ್ದರಂತೂ ಇನ್ನೂ ಉತ್ತಮ. ನೋಡಲೂ ಪ್ರಫುಲ್ಲವಾಗಿರುತ್ತದೆ, ಸೊಳ್ಳೆ, ತಿಗಣೆಗಳ ಕಾಟವೂ ಇರುವುದಿಲ್ಲ. ಮಾಮೂಲಿ ಟ್ಯೂಬ್ ಲೈಟಿನ ಬದಲು ಅಲಂಕಾರಿಕ ದೀಪಗಳನ್ನು ಕೋಣೆಯನ್ನು ಸಜಾಯಿಸಿ. ಕಿಟಕಿಗಳಿಗೂ ಮನಮೆಚ್ಚುವ ಕರ್ಟನ್ ಗಳನ್ನು ಇಳಿಬಿಡಿ.

ಮನಮೆಚ್ಚಿದ ಮಡದಿಗಾಗಿ ಇಷ್ಟೂ ಮಾಡದಿದ್ದರೆ ಹೇಗೆ? ಶಯನಗೃಹ ನಿಮ್ಮ ಕಲಾತ್ಮಕತೆಗೆ ಕನ್ನಡಿ ಹಿಡಿದಂತಿರಬೇಕು. ಕೊನೆಗೆ, ಲೈಟ್ 'ಉಫ್' ಅಂದಮೇಲೂ ಮತ್ತೆ ದೀಪವನ್ನು ಬೆಳಗಲೇಬೇಕು, ಅದೇ ಕೋಣೆಯಲ್ಲಿ ಜೀವನ ಸವಿಸಲೇಬೇಕು, ಅದೇ ಹೆಂಡತಿಯೊಡನೆ ಜೀವನಪರ್ಯಂತ ಬಾಳಲೇಬೇಕು ಅಲ್ವಾ? ನೆನಪಿರಲಿ, ಇಂಗ್ಲಿಷಿನಲ್ಲಿ 'ವೆಲ್ ಬಿಗನ್ ಈಸ್ ಹಾಫ್ ಡನ್' ಅನ್ನುವ ಮಾತಿದೆ. ಆದ್ದರಿಂದ, ಜೀವನದ ಮೊದಲ ರಾತ್ರಿ ಅದ್ಭುತವಾಗಿರಲಿ. ಮದುವೆಯಲ್ಲಿ ಮಾಡಿದ ಸವಿರುಚಿಯ ಭೋಜನ, ಬಾಳ ಸಂಗಾತಿಯ ಮೊದಲ ನೋಟ, ಮೊದಲ ಸ್ಪರ್ಶ, ಮೊದಲ ರಾತ್ರಿಯ ಮೊದಲ ಚುಂಬನ ಕೊನೆಯತನಕ ನೆನಪಿನಲ್ಲುಳಿಯುತ್ತವೆ, ಹಾಗೆಯೇ ಈ ಅಲಂಕಾರವೂ ಕೂಡ.

ಅಂದ ಹಾಗೆ : ಈ ಅಲಂಕಾರಗಳನ್ನು ಮೊದಲ ರಾತ್ರಿ ಮಾತ್ರ ಮಾಡಬೇಕೆಂದೇನಿಲ್ಲ. ಇಪ್ಪತ್ತೈದು ವರ್ಷ ಕಳೆದ ನಂತರದ ಸುದಿನ, ನಿಮಗನಿಸಿದಾಗಲೆಲ್ಲ, ನಿಮಗೆ ಮೂಡು ಇದ್ದಾಗಲೆಲ್ಲ ಶಯನಕೋಣೆಯನ್ನು ಅಲಂಕರಿಸಿ ಮಿಲನ ಮಹೋತ್ಸವಗಳನ್ನು ಆಚರಿಸಿಕೊಳ್ಳಿ. ಆಲ್ ದಿ ಬೆಸ್ಟ್.

ಬರಹ : ಶ್

English summary
First night decorations for the new couple.
Story first published: Wednesday, September 17, 2008, 15:35 [IST]

Get Notifications from Kannada Indiansutras