ಬ್ಲಾಗ್ ಗಳ ಮೂಲಕ ತಮ್ಮ ತಮ್ಮ ಗೆಳೆಯ, ಕುಟುಂಬದವರಿಗೆ ಈ ಅಭಿಯಾನಕ್ಕೆ ನೊಂದಾಯಿಸಿಕೊಳ್ಳಲು ವಿನಂತಿಸಿಕೊಂಡಿರುವ ಇವರುಗಳು ಬೆಂಗಳೂರು ನಾಗರೀಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ಹೇಳಿಕೊಂಡಿದ್ದಾರೆ. ನಮ್ಮ ಜೀವನವನ್ನು ರೂಪಿಸಿಕೊಳ್ಳಲು ನಾವು ಶಕ್ತರು, ನೈತಿಕ ಪೋಲಿಸರಿಂದ ಕಲಿಯಬೇಕಾದ ಅವಶ್ಯಕತೆ ನಮಗಿಲ್ಲ. ಈ ಅಂದೋಲನದ ಮೂಲಕ ಶ್ರೀರಾಮ ಸೇನೆಗೆ ಮತ್ತೊಮ್ಮೆ ನಮ್ಮ ಸಂದೇಶವನ್ನು ತಿಳಿಯಪಡಿಸುವುದು ನಮ್ಮ ಉದ್ದೇಶ ಎಂದು ಹೇಳಿದೆ.
ನಮ್ಮ ಸ್ವಾತಂತ್ರ್ಯವನ್ನು ತಡೆಯಲು ಅವರು ಯಾರು? ನಮಗೆ ಬೇಕಾದ ಹಾಗೆ ನಾವು ಇರುತ್ತೇವೆ, ನನ್ನ ಕುಟು೦ಬ ಸದಸ್ಯರನ್ನು, ಗೆಳೆಯರನ್ನು ಸಂಪರ್ಕಿಸಿದ್ದೇನೆ, ಶ್ರೀರಾಮ ಸೇನೆಗೆ ಸರಿಯಾದ ಸಂದೇಶ ಕಳುಹಿಸಬೇಕಾಗಿದೆ ಎಂದು ಟೆಕ್ಕಿ ಸುಧಾಕರ್ ಹೇಳಿಕೊಂಡರೆ, ನಮ್ಮ ಭಾರತೀಯ ಸ೦ಸ್ಕ್ರತಿಯ ಪ್ರಕಾರ ಈ ಆಂದೋಲನ ನಡೆಸುತ್ತೇವೆ ಎಂದು ಇನ್ನೊಂದು ಟೆಕ್ಕಿಯ ಅಂಬೋಣ. ಈ ಅಭಿಯಾನವನ್ನು ಚಳವಳಿಯನ್ನಾಗಿ ಬದಲಿಸಬೇಕೆಂದು ಕೆಲವರು ಹೇಳಿಕೊಂಡಿದ್ದಾರೆ. ಜನಪ್ರಿಯತೆಗಾಗಿ ಕೀಳುಮಟ್ಟದ ಪ್ರಚಾರ ನಡೆಸುತ್ತಿರುವ ಪ್ರಮೋದ್ ಮುತಾಲಿಕ್ ಗೆ ಈ ಬಾರಿ ಕಾಮಸೂತ್ರದ ಸಿಡಿ ಯನ್ನು ಕಳುಹಿಸಲಿದ್ದೇವೆ ಎಂದು ಈ ಟೆಕ್ಕಿಗಳು ಮಿಡ್ ಡೇ ಆಂಗ್ಲ ಅಂತರ್ಜಾಲಕ್ಕೆ ತಿಳಿಸಿದ್ದಾರೆ.
ಕಾಮಸೂತ್ರ ನಮ್ಮ ಭಾರತೀಯ ಸಂಸ್ಕೃತಿಯ ಅಂಗವೇ ಆದರೂ ಇದನ್ನು ಆಚರಿಸಿಕೊಳ್ಳಲು ಒಂದು ದಿನ ಬೇಕಾ? ಮುಕ್ತ ಆಲಿಂಗನ ಆಚರಿಸಿದ್ದಾಯಿತು, ಒಂದು ದಿನ ಮುಕ್ತವಾಗಿ ಮುತ್ತು ನೀಡುವ ಅಭಿಯಾನ, ಇನ್ನೇನೇನೋ ಪ್ರಾರಂಭವಾದರೂ ಆಶ್ಚರ್ಯವಿಲ್ಲ. ನಮ್ಮ ದೇಶದಲ್ಲಿ ಅರ್ಥವಿಲ್ಲದ ಆಚರಣೆಗಳು ಬೇಕಾದಷ್ಟಿವೆ, ಅರ್ಥವಿರುವ ಆಚರಣೆಗಳು ಅರ್ಥ ಕಳೆದುಕೊಳ್ಳುತ್ತಿವೆ. ಇಂಥದರಲ್ಲಿ, ಯುವಕರು ಕಾಮಸೂತ್ರ ದಿನ ಆಚರಿಸುತ್ತಿರುವುದು ಸರಿಯೆ?
ಈ ಮಧ್ಯೆ, ಪಿಂಕ್ ಚಡ್ಡಿಗಳನ್ನು ತಮಗೆ ಕಳಿಸಿದವರ ವಿರುದ್ಧ ಮೊಕದ್ದಮೆ ಹೂಡುವುದಾಗಿ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ. ಕಾಮಸೂತ್ರ ದಿನಕ್ಕೆ ಸೇನೆ ಯಾವ ರೀತಿ ಉತ್ತರಿಸುತ್ತದೋ ಕಾದು ನೋಡಬೇಕು.