ಎದ್ದು ಹೋಗಿ ಮಹಾ ಬೋರಿಂಗಿನ ಪುಸ್ತಕವನ್ನು ಓದಿ ಬರುತ್ತೀರಿ, ದಿಂಬು ಬದಲಾಯಿಸುತ್ತೀರಿ, ಮಗ್ಗಲು ಬದಲಿಸುತ್ತೀರಿ, ಮುಸುಕು ಹೊದಿಯುತ್ತೀರಿ, ನಿದ್ದೆ ಮಾಡಲೇಬೇಕೆಂದು ಏಕಾಗ್ರತೆಯಿಂದ ಪ್ರಯತ್ನಿಸುತ್ತೀರಿ... ಆದರೂ ನಿದಿರಾದೇವಿಯ ಪರವಶರಾಗುತ್ತಿಲ್ಲ! ಕಾರಣವೇನಿರಬಹುದು?
ಈ ನಿದ್ರಾಹೀನತೆಗೆ ಕಾರಣ ನಿಮ್ಮ ಹೆಂಡತಿಯೊಡನೆ ಹಂಚಿಕೊಂಡಿರುವ ಹಾಸಿಗೆ. ಅರ್ಥಾತ್ ಇಬ್ಬರೂ ಒಟ್ಟಿಗೇ ಮಲಗಿರುವುದು. ಅರ್ಥಾತ್ ಹಾಸಿಗೆ ಹಂಚಿಕೊಂಡಿರುವುದು.
ಆಶ್ಚರ್ಯದ ಸಂಗತಿಯಾದರೂ ಇದು ಸತ್ಯ ಎನ್ನುತ್ತಾರೆ ನಿದ್ರೆಯ ತಜ್ಞ, ಬ್ರಿಟನ್ನಿನ ವೈದ್ಯ ಡಾ. ನೀಲ್ ಸ್ಟಾನ್ಲಿ. ಗೊರಕೆ ಹೊಡೆಯುವ, ಮಲಗುವ ಮುನ್ನ ವಿಪರೀತ ಮಾತಾಡಿ ತಲೆಕೆಡಿಸುವ ಮಡದಿಯರಿಂದ ನಿದ್ರಾಭಂಗವಾಗುವುದು ಸಾಮಾನ್ಯ ಸಂಗತಿ. ಆದರೆ, ಗಂಡ-ಹೆಂಡತಿಯರಿಬ್ಬರೂ ಹಾಸಿಗೆ ಹಂಚಿಕೊಳ್ಳುವುದರಿಂದ ನಿದ್ರಾಭಂಗವಾಗುವ ಸಂಗತಿಯಿದೆಯಲ್ಲ ಅದು ಹೊಸ ವಿದ್ಯಮಾನ. ಈ ಭೂಮಿಯಲ್ಲಿ ಶೇ.50ರಷ್ಟು ಜನ ಹಾಸಿಗೆ ಹಂಚಿಕೊಳ್ಳುವುದರಿಂದ ಸುಖನಿದ್ದೆಯಿಂದ ವಂಚಿತರಾಗುತ್ತಿದ್ದಾರೆ ಅಂತಾರೆ ಸ್ಟಾನ್ಲಿ.
ಇನ್ನೊಂದು ವಿಷಯ ಗಮನಿಸಬೇಕು. ಗಂಡ-ಹೆಂಡತಿಯರಿಬ್ಬರೂ ಒಟ್ಟಾಗಿಯೇ ಮಲಗುತ್ತೀರಿ ಮತ್ತು ಇಬ್ಬರೂ ಚೆನ್ನಾಗಿಯೇ ನಿದ್ದೆ ಹೊಡೆಯುತ್ತೀರೆಂದಾದರೆ ಮೇಲಿನ ವಿಷಯದ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಿಮ್ಮ ಸುಖ ನಿದ್ರೆ ಹಾಗೇ ಮುಂದುವರಿಯಲಿ. ರಾತ್ರಿಯಾಗುತ್ತಿದ್ದಂತೆ ನಾನಾ ಚಿಂತೆಗಳನ್ನು ದಿಂಬಿನ ಕೆಳಗಿಟ್ಟು ಸುಖನಿದ್ರೆ ಕಾಣುವ ಸುಖಜೀವಿಗಳಿಗೂ ಇದು ಅನ್ವಯಿಸುದಿಲ್ಲ. ನಿದ್ದೆ ಹಾಳಾಗಿ ಹೋಗಲಿ ಚಿನ್ನದಂಥ ಹೆಂಡತಿಯನ್ನು ಒಂದು ಕ್ಷಣವೂ ಬಿಟ್ಟಿರುವುದಿಲ್ಲ ಅನ್ನುವ ಹಬ್ಬಿಗೂ ಇದು ಅನ್ವಯಿಸುವುದಿಲ್ಲ.
ಈ ಸಮಸ್ಯೆಗೆ ಸ್ಟಾನ್ಲಿ ಅವರು ನೀಡುವ ಕಾರಣ ಹೀಗಿದೆ. ಹಿಂದಿನ ಕಾಲದಲ್ಲಿ ಅವಿಭಜಿತ ಕುಟುಂಬವಿದ್ದಾಗ ಮತ್ತು ವಾಸಕ್ಕೆ ದೊಡ್ಡ ದೊಡ್ಡ ಮನೆಗಳಿದ್ದಾಗ ಈ ಸಮಸ್ಯೆ ಉದ್ಭವವಾಗುತ್ತಿರಲೇ ಇಲ್ಲ. ಗಂಡ ಹೆಂಡತಿಯರಿಬ್ಬರೂ ಅನೇಕ ಸಂದರ್ಭದಲ್ಲಿ ಒಟ್ಟಿಗೆ ಮಲಗುತ್ತಿರಲಿಲ್ಲ. ಸೋ ನ್ಯಾಚುರಲಿ, ಜನಸಂಖ್ಯೆಯೂ ಅಷ್ಟಿರಲಿಲ್ಲ! ಜನಸಂಖ್ಯೆ ಏರುತ್ತಿದ್ದಂತೆ, ವ್ಯಾಪಾರಕ್ಕಾಗಿ ಹಳ್ಳಿಕೇರಿಯನ್ನು ಬಿಟ್ಟು ಪ್ಯಾಟಿಗೆ ಬಂದ ಸಂಸಾರ ಅನಿವಾರ್ಯವಾಗಿ ಕೋಣೆ ಇದ್ದಷ್ಟು ಕಾಲು ಚಾಚುವ ಮತ್ತು ಹಾಸಿಗೆ ಹಂಚಿಕೊಳ್ಳುವ ಅನಿವಾರ್ಯತೆ ಎದುರಾಯಿತು.
ಹೀಗಂತ ಜೀವನ ಪರ್ಯಂತ ಪತಿ ಪತ್ನಿಯರಿಬ್ಬರೂ ಬೇರೆ ಬೇರೆಯಾಗಿಯೇ ಮಲಗಬೇಕಂತಿಲ್ಲ. ಒಂದು ಸಣ್ಣ ಬ್ರೇಕ್ ನೀಡಿ ಹೆಂಡತಿಯನ್ನು ಕೋಣೆಯಲ್ಲಿ ಮಲಗಲು ಬಿಟ್ಟು ಚಾಪೇ ದಿಂಬಿನ ಸಮೇತ ಪೋರ್ಟಿಕೋದಲ್ಲಿ ಕೆಲ ದಿನ ಮಲಗಿ ನೋಡಿ. ಮುದ್ದಿನ ಮಡದಿ ತವರಿಗೆ ಬಹಳ ದಿನ ಹೋದರಂತೂ ಚಿಂತೆಯೇ ಇಲ್ಲ. ಬಿಂದಾಸ್ ದುನಿಯಾ ನಿಮ್ಮದೇ. ನಿದ್ದೆಯೂ ತಾನಾಗಿಯೇ ಆವರಿಸಿಕೊಳ್ಳುತ್ತದೆ.
ಮಲಗುವ ಮುನ್ನ ಒಂದು ಸುಂದರ ಕಾಮಕೇಳಿ ಕೂಡ ಸುದೀರ್ಘ ನಿದ್ದೆ ಆವರಿಸಿಕೊಳ್ಳಲು ಸಹಕಾರಿಯಾಗುತ್ತದೆ. ಅದು ಬಿಟ್ಟು ಹಾಸಿಗೆಗೆ ಮೈಚೆಲ್ಲುತ್ತಿದ್ದಂತೆ ನಾನೊಂದು ತೀರ, ನೀನೊಂದು ತೀರ ಅಂತ ಮಲಗುವವರನ್ನು ನಿದ್ದೆ ಕೂಡ ಭೂತದಂತೆ ಬಂದು ಕಾಡುತ್ತದೆ. ಪ್ರತಿದಿನ ಹಾಸಿಗೆ ಹಂಚಿಕೊಳ್ಳುವ ಬದಲು ಆಗಾಗ ಬೇರೆಬೇರೆಯಾಗಿ ಮಲಗಿ ಪ್ರಯತ್ನಿಸಿ. ನಿಮ್ಮ ನಿದ್ರಾ ಸಮಸ್ಯೆಗೆ ಪರಿಹಾರ ಸಿಕ್ಕೇ ಸಿಗುತ್ತದೆ. ಆರೋಗ್ಯದಲ್ಲಿಯೂ ಪರಿವರ್ತನೆ ಕಂಡುಬರುತ್ತದೆ.