'ನನ್ನ ಆಸ್ತಿ-ಪಾಸ್ತಿ, ಬ್ಯಾಂಕ್ ಬ್ಯಾಲೆನ್ಸ್ ಏನಿದೆ ಅನ್ನೋದು ನನ್ನ ಪ್ರೈವೆಟ್ ವಿಷಯ. ಮದುವೆ ಆದಮೇಲೆ ಅದು ನಮ್ಮಿಬ್ಬರದು ಅನ್ನೋದು ಯಾವುದು, ಯಾವುದು ಅಲ್ಲ ಎಂಬುದನ್ನು ನಾವೇ ನಿರ್ಧರಿಸೋನ. ಈ 'ನಮ್ಮದು' ಅನ್ನೋದರಲ್ಲಿ ಏನ್ ಒಳಗೋ, ಏನ್ ಹೊರಗೋ ಅನ್ನೋದು ಸ್ಪಷ್ಟವಾಗಿ ಇರಬೇಕು ಅಂತ ನನಗೆ ಅನ್ಸತ್ತೆ' ಎಂದು ಮುಂದಿನ ವರ್ಷ ವಿವಾಹವಾಗಲಿರುವ, 28 ವರ್ಷದ ಸಾಫ್ಟ್ವೇರ್ ಇಂಜಿನಿಯರ್ ಮೇಘನಾ ಅವರ ಮಾತು. ಅವರು 'ಪ್ರೀ-ನಪ್ಟಿಯಲ್ ಅಗ್ರಿಮೆಂಟ್' (ವಿವಾಹಪೂರ್ವ ಒಪ್ಪಂದ) ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.
ಇದು ಕೇವಲ ಮೇಘನಾ ಮತ್ತು ಅವರ ಪಾರ್ಟ್ನರ್ಗೆ ಸೀಮಿತವಾಗಿಲ್ಲ. ಮಿಲೇನಿಯಲ್ಸ್ ಮತ್ತು ಜೆನ್‌ ಜಿ ಸದಸ್ಯರು ಪ್ರೀತಿ ಮತ್ತು ಸಂಬಂಧಗಳನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತಿದೆ. 'ರೋಮ್ಯಾಂಟಿಕ್' ಅನ್ನೋದರ ಹಿಂದೆ 'ಪ್ರಾಯೋಗಿಕ' ಮತ್ತು 'ಸ್ಪಷ್ಟ' ಆಗಿರಬೇಕು ಎಂಬ ಬೇಡಿಕೆ ಈ ತಲೆಮಾರಿನಲ್ಲಿ ಕಾಣಸಿಗುತ್ತಿದೆ. ಇದರ ಪ್ರತೀಕವೇ 'ವಿವಾಹಪೂರ್ವ ಒಪ್ಪಂದ'

ಏಕೆ ಈ ಒಪ್ಪಂದ?
ಹಿಂದಿನ ತಲೆಮಾರಿನಲ್ಲಿ ವಿವಾಹಪೂರ್ವ ಒಪ್ಪಂದವನ್ನು ಅವಿಶ್ವಾಸ ಅಥವಾ ವಿವಾಹ ವಿಫಲತೆಯ ಭಯದ ಸಂಕೇತವಾಗಿ ಕಾಣಲಾಗುತ್ತಿತ್ತು. ಆದರೆ ಇಂದಿನ ಯುವಜನತೆ ಇದನ್ನು ಒಂದು ಜವಾಬ್ದಾರಿಯುತ ನಡವಳಿಕೆಯ ಉಪಕರಣವಾಗಿ ಬಳಸುತ್ತಿದೆ.
'ಇದು ಟ್ರಸ್ಟ್ ಅನ್ನು ಕಡಿಮೆ ಮಾಡುವುದಲ್ಲ. ಇದು ಸಂಬಂಧಕ್ಕೆ ಒಂದು ಫೌಂಡೇಶನ್ ಕಟ್ಟುವ ಹಾಗೆ' ಎನ್ನುತ್ತಾರೆ ಬೆಂಗಳೂರಿನ ಮನೋವಿಜ್ಞಾನಿ ಮತ್ತು ರಿಲೇಶನ್ಶಿಪ್ ಕೌನ್ಸೆಲರ್ ಡಾ. ಪ್ರಿಯಾ ಪಾಟೀಲ್‌. 'ಯುವಕರು ತಮ್ಮ ಕರಿಯರ್, ಹಣಕಾಸು ಮತ್ತು ವೈಯಕ್ತಿಕ ಗುರಿಗಳ ಬಗ್ಗೆ ಹೆಚ್ಚು ಸ್ಪಷ್ಟರಾಗಿದ್ದಾರೆ. ಮದುವೆ ಮಾಡಿಕೊಳ್ಳುವ ಮುನ್ನವೇ ಈ ಎಲ್ಲಾ ವಿಷಯಗಳ ಮೇಲೆ ಮುಕ್ತವಾಗಿ ಚರ್ಚಿಸಿ, ಅದನ್ನು ಕಾಗದದ ಮೇಲೆ ಇಡುವುದರಿಂದ ಭವಿಷ್ಯದಲ್ಲಿ ಯಾವುದೇ ಗಲಿಬಿಲಿ ಅಥವಾ ಸಂಘರ್ಷ ತಪ್ಪಿಸಬಹುದು' ಎಂದು ಪ್ರೀಯಾ ಹೇಳುತ್ತಾರೆ.
ಒಪ್ಪಂದದಲ್ಲಿ ಏನಿದೆ?
ಈ ಒಪ್ಪಂದಗಳು ಕೇವಲ ಆಸ್ತಿ-ಪಾಸ್ತಿಯ ವಿಭಜನೆಯನ್ನು ಮಾತ್ರವಲ್ಲ, ದಿನಚರಿ ಜೀವನದ ಸೂಕ್ಷ್ಮ ವಿಚಾರಗಳನ್ನೂ ಒಳಗೊಂಡಿರುತ್ತವೆ.
ಹಣಕಾಸು: ಯಾರ ಶೇಕಡಾ ಆದಾಯವನ್ನು ಜಂಟಿ ಖಾತೆಗೆ ಇಡಬೇಕು? ಯಾರ ಖರ್ಚುಗಳನ್ನು ಯಾರು ಭರಿಸಬೇಕು? ಹೂಡಿಕೆ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳಬೇಕು?
ಮನೆಗೆಲಸಳು: ಬಟ್ಟೆ ತೊಳೆಯುವುದು ಯಾರ ಕೆಲಸ? ಭೋಜನ ಮಾಡುವ ದಿನಗಳ ಶೆಡ್ಯೂಲ್ ಏನು? ಸ್ವಚ್ಛತೆಯ ಜವಾಬ್ದಾರಿ ಯಾರದು?
ಡಿಜಿಟಲ್ ಗೌಪ್ಯತೆ: ಒಬ್ಬರಿಗೊಬ್ಬರು ಸೋಷಲ್ ಮೀಡಿಯಾ ಪಾಸ್ವರ್ಡ್ಗಳನ್ನು ನೀಡಬೇಕೇ? ಒಬ್ಬರ ಫೋನ್ ಮತ್ತೊಬ್ಬರು ತೆರೆಯಬಹುದೇ?
ಕುಟುಂಬ ಯೋಜನೆ: ಮಕ್ಕಳನ್ನು ಹೇಗೆ ಬೆಳೆಸಬೇಕೆಂದು ಯೋಚಿಸಿದ್ದೀರಿ? ಅವರ ಶಿಕ್ಷಣ, ಧಾರ್ಮಿಕತೆ ಬಗ್ಗೆ ಏನು ಯೋಜನೆ ಇದೆ?
ವಕೀಲರ ದೃಷ್ಟಿಕೋನ
ಕುಟುಂಬ ಕಾನೂನು ವಕೀಲ ಅರ್ಜುನ್ ರೆಡ್ಡಿ ಅವರು ಹೇಳುತ್ತಾರೆ, 'ಕಳೆದ 5 ವರ್ಷಗಳಲ್ಲಿ ವಿವಾಹಪೂರ್ವ ಒಪ್ಪಂದಕ್ಕಾಗಿ ವಿಚಾರಿಸುವ ಯುವ ಜೋಡಿಗಳ ಸಂಖ್ಯೆ ಶೇ 30 ರಷ್ಟು ಹೆಚ್ಚಿದೆ. ಹೆಚ್ಚಿನವರು ಐಟಿ ಮತ್ತು ಫೈನಾನ್ಸ್ ಸೆಕ್ಟರ್ನಲ್ಲಿ ಕೆಲಸ ಮಾಡುವ, financially independent ವ್ಯಕ್ತಿಗಳು. ಇದು ಕಾನೂನು ದಾಖಲೆ ಮಾತ್ರವಲ್ಲ, ಇಬ್ಬರ ನಡುವೆ ಒಂದು ಸಂಭಾಷಣೆಯನ್ನು ಪ್ರಾರಂಭಿಸುವ ಒಂದು ಸಾಧನ' ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೀಗೆಂದೇ, 'ಪೋಸ್ಟ-ನಪ್ಟಿಯಲ್ ಅಗ್ರಿಮೆಂಟ್' (ವಿವಾಹೋತ್ತರ ಒಪ್ಪಂದ) ಕೂಡ ಜನಪ್ರಿಯವಾಗುತ್ತಿದೆ. ಮದುವೆಯ ನಂತರ ಜೀವನಶೈಲಿ, ಆದಾಯ, ಗುರಿಗಳು ಬದಲಾದಾಗ, ಜೋಡಿಗಳು ತಮ್ಮ ನಿಯಮಗಳನ್ನು ಮರುಹೊಂದಾಣಿಕೆ ಮಾಡಿಕೊಳ್ಳಲು ಇದನ್ನು ಬಳಸುತ್ತಾರೆ.
ವಿರೋಧಾಭಾಸದ ಅಭಿಪ್ರಾಯ
ಆದರೆ ಎಲ್ಲರೂ ಈ ಪ್ರವೃತ್ತಿಯನ್ನು ಸ್ವಾಗತಿಸುವುದಿಲ್ಲ. "ಪ್ರೀತಿ, ನಂಬಿಕೆ, ರಾಜಿ ಇವುಗಳ ಮೇಲೆ ಸಂಬಂಧ ಕಟ್ಟಬೇಕೇ ವಿನಾ ಒಪ್ಪಂದದ ಮೇಲೆ ಅಲ್ಲ. ಇದರಿಂದ ಸಂಬಂಧವು ವ್ಯವಹಾರಿಕ ಸ್ವರೂಪ ಪಡೆಯುತ್ತದೆ' ಎಂದು ಭಾವಿಸುತ್ತಾರೆ 62 ವರ್ಷದ ವ್ಯವಸ್ಥಾಪಕಿ ಲಲಿತಾ ದೇಶಪಾಂಡೆ.
ಆದರೆ ಮೇಘನಾ ಅವರ ತಲೆಮಾರಿನವರು ಇದನ್ನು ವಿಭಿನ್ನವಾಗಿ ನೋಡುತ್ತಾರೆ. 'ವ್ಯವಹಾರದಲ್ಲಿ ನಮಗೆ ಸ್ಪಷ್ಟತೆ ಬೇಕು, ಆದ್ರೆ ಜೀವನಸಂಗಾತಿಯೊಂದಿಗೆ ಬೇಡವೇ? ನಮ್ಮ ಭವಿಷ್ಯದ ಬಗ್ಗೆ, ನಮ್ಮ ಹಣಕಾಸಿನ ಬಗ್ಗೆ ಇಷ್ಟು ಗಂಭೀರವಾಗಿ ಯೋಚಿಸುವುದು, ಅದನ್ನು ಮಾತನಾಡುವುದು ಅವರ ಮೇಲೆ ನನಗಿರುವ ಪ್ರೀತಿ ಮತ್ತು ಗೌರವವನ್ನು ತೋರಿಸುವ ಮಾರ್ಗ' ಎಂದು ಮೇಘನಾ ಹೇಳುತ್ತಾರೆ.
ಪ್ರೀತಿಯು ಇನ್ನೂ ರೋಮ್ಯಾಂಟಿಕ್ ಆಗಿದೆ, ಆದರೆ ಅದನ್ನು ನಿರ್ಮಿಸುವ ವಿಧಾನವು ಹೆಚ್ಚು ಪ್ರಾಯೋಗಿಕ ಮತ್ತು ಸಹಭಾಗಿತ್ವದಿಂದ ಕೂಡಿರುವ ದಿಕ್ಕಿನಲ್ಲಿ ಹೊರಳುತ್ತಿದೆ. 'forever' ಅನ್ನು ನಂಬುವುದು ಮುಗಿದಿಲ್ಲ. ಆದರೆ ಅದನ್ನು ಹೇಗೆ ನಿರ್ವಹಿಸಬೇಕೆಂಬುದರ ಬಗ್ಗೆ ಈ ತಲೆಮಾರಿನವರು ಹೆಚ್ಚು ಜಾಗರೂಕರಾಗಿದ್ದಾರೆ ಎಂದು ಹೇಳಬಹುದು.



Click it and Unblock the Notifications





