ವೇಗವಾಗಿ ಹಬ್ಬುತ್ತಿರುವ ಎಚ್ಐವಿ ವೈರಸ್ ನಿಂದ ದೂರವಿರಲು ಕಾಂಡೋಮ್ ಬಳಕೆ ಭಾರತದಲ್ಲಿ ಅತಿ ವಿರಳ. ಗಂಡಸರು ಇನ್ನೂ ನಾಚಿಕೊಳ್ಳುವ ಹಂತದಲ್ಲಿದ್ದಾರೆ. ಮಹಿಳೆಯರನ್ನು ಈ ಕುರಿತು ಪ್ರಶ್ನಿಸುವುದೇ ಬೇಡ.
ನಾಚಿಕೆಯಿಲ್ಲದೆ ಕಾಂಡೋಮ್ ಉಪಯೋಗಿಸಲು ಮಹಿಳೆಯರು ಒಪ್ಪುವುದಾದರೆ ಅತ್ಯಾಚಾರದಿಂದ ರಕ್ಷಿಸಿಕೊಳ್ಳಲು ಹೊಸ ಅಸ್ತ್ರವನ್ನು ಕಂಡುಹಿಡಿಯಲಾಗಿದೆ. ಅದೇ ರೇಪ್-ಆಕ್ಸ್ ಕಾಂಡೋಮ್. ಒಳಭಾಗದಲ್ಲಿ ಹಲ್ಲಿನಂತಿರುವ ಈ ಕಾಂಡೋಮ್ ಅತ್ಯಾಚಾರವನ್ನು ವಿಫಲಗೊಳಿಸುತ್ತದೆ. ಗಂಡನಿಂದಲೇ ಅತ್ಯಾಚಾರಕ್ಕೆ ನೂಕಿಸಿಕೊಂಡವರಿಗೆ, ಅಪ್ಪನಿಂದಲೇ ಲೈಂಗಿಕ ದೌರ್ಜನ್ಯಕ್ಕೊಳಗಾದವರಿಗೆ, ಗಂಡನಿಲ್ಲದಾಗ ಅತ್ಯಾಚಾರಕ್ಕೊಳಗಾದವರಿಗೆ ಇದು ವರದಾನವಾಗಲಿದೆ.
ಇದನ್ನು 2006ರಲ್ಲಿಯೇ ಸಾನೆಟ್ ಎಲ್ಹರ್ಸ್ ಎಂಬ ಮಹಿಲೆ ಕಂಡುಹಿಡಿದಿದ್ದಾಳಾದರೂ ಫೀಫಾ ವಿಶ್ವಕಪ್ 2010 ನಡೆಯುತ್ತಿರುವ ಸಂದರ್ಭದಲ್ಲಿ 30 ಸಾವಿರ ಜನರಿಗೆ ಉಚಿತವಾಗಿ ಹಂಚಲಾಗಿದೆ.
ಈ ಕಾಂಡೋಮ್ ಅನ್ನು ಯೋನಿಯಲ್ಲಿ ಮಹಿಳೆ ಧರಿಸಿದರೆ ಅತ್ಯಾಚಾರಿಗೆ ವಿಪತ್ತು ಕಾದಿದೆ ಎಂದೇ ಅರ್ಥ. ಗುಪ್ತಾಂಗ ಪ್ರವೇಶಿಸಿದಾಗ ಶಿಶ್ನವನ್ನು ಹರಿತ ಹಲ್ಲುಗಳ ಕಾಂಡೋಮ್ ಕಚ್ಚಿಹಿಡಿದುಬಿಡುತ್ತದೆ. ವೈದ್ಯರು ಬಂದು ಶಸ್ತ್ರಚಿಕಿತ್ಸೆಯ ಮೂಲಕವೇ ಅದನ್ನು ತೆಗೆಯಬೇಕು. ಮೂತ್ರ ವಿಸರ್ಜನೆ ಕೂಡ ಸಾಧ್ಯವಿಲ್ಲ. ಇದು ಎಚ್ಐವಿ ಸೋಂಕು ಹರಡುವುದರಿಂದಲೂ ರಕ್ಷಣೆ ನೀಡುತ್ತದೆ ಅಂತಾರೆ ಎಲ್ಹರ್ಸ್.
ಹೊಸ ಸಂಶೋಧನೆ ಮಹಿಳೆಯರಿಗೆ ವರದಾನವಾಗಿದೆ ಮತ್ತು ಪುರುಷ ವರ್ಗದಿಂದ ಟೀಕೆಯನ್ನೂ ಎದುರಿಸಿದೆ. ಮಹಿಳೆಯರು ಪ್ರತಿಕ್ಷಣವೂ ತಮ್ಮ ಮೇಲೆ ಅತ್ಯಾಚಾರವಾಗುತ್ತದೆ ಎಂದು ಭಾವಿಸಿಯೇ ಇರಬೇಕೆ, ಇದನ್ನು ಧರಿಸಲು ಎಂದು ಕೆಲವರು ಖಾರವಾಗಿ ಪ್ರಶ್ನಿಸಿದ್ದಾರೆ. ಇದರ ಬಳಕೆಯಿಂದ ಗಾಯಗೊಂಡ ಅತ್ಯಾಚಾರಿ ಕ್ರುದ್ಧಗೊಂಡು ಮಹಿಳೆಯನ್ನು ಕೊಲ್ಲಲೂ ಯತ್ನಿಸಬಹುದು ಎಂದು ಕೆಲವರು ಎಚ್ಚರಿಸಿದ್ದಾರೆ.